ಅನುಭವ ಮಂಟಪಕ್ಕೆ 3 ವರ್ಷದ ಗಡುವು

Anubhava Mantapa
Published on

ಬೆಂಗಳೂರು: ಬಸವಕಲ್ಯಾಣದಲ್ಲಿ 532 ಕೋಟಿ ರೂ.ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸುವ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಮೂರು ವರ್ಷದೊಳಗೆ ಕಾಮಗಾರಿ ಮುಗಿಸಲು ಗಡುವು ವಿಧಿಸಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯತೆಯಲ್ಲಿ ಗುರುವಾರ ನಡೆದ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ನೂತನ ಅನುಭವ ಮಂಟಪದ ಕಾಮಗಾರಿ ಯಾವುದೇ ಕಾರಣಕ್ಕೂ ತಡ ಆಗಬಾರದು, ಮೂರು ವರ್ಷದೊಳಗೆ ಮುಗಿಯುವಂತಾಗಬೇಕು, ಸರ್ಕಾರ ಎಲ್ಲ ರೀತಿಯಲ್ಲಿಯೂ ನೆರವಾಗಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದರು. ಅನುಭವ ಮಂಟಪ ಬಸವಣ್ಣನವರ ಕ್ರಾಂತಿಕಾರಿ ವೇದಿಕೆ. ಈ ಮಂಟಪದ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸವನ್ನು ಬಸವಣ್ಣನವರು ಮಾಡಿದ್ದಾರೆ. ಅವರು ಮಾಡಿರುವ ಸಾಮಾಜಿಕ ಕ್ರಾಂತಿಯನ್ನು ಪ್ರತಿಬಿಂಬಿಸುವ ರೂಪದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದೆ. 12ನೇ ಶತಮಾನದಲ್ಲಿ ಇದ್ದ ವಚನಕಾರರು, ದಾರ್ಶನಿಕರ ಕುರಿತಾದ ಮಾಹಿತಿ ನೀಡುವಂತಹ ಕಿರು ಚಿತ್ರಗಳ ಪ್ರದರ್ಶನ, ಬಸವಣ್ಣನವರ ಜೀವನ ಸಾಧನೆ ಬಿಂಬಿಸುವ ಮಾಹಿತಿಗಳನ್ನು ವಿವರಿಸುವ ವ್ಯವಸ್ಥೆ ಅನುಭವ ಮಂಟಪದಲ್ಲಿ ಇರಲಿದೆ ಎಂದು ಸರ್ಕಾರ ಹೇಳಿದೆ.

ಕಂದಾಯ ಸಚಿವ ಆರ್​.ಅಶೋಕ್​, ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್​, ಕೆಕೆಆರ್​ಡಿಬಿ ಅಧ್ಯ ಬಸವರಾಜ ಪಾಟೀಲ್​ ಸೇಡಂ, ರುನಾಥ ರಾವ್​ ಮಾಲ್ಕಾಪುರೆ, ಅಮರನಾಥ ಪಾಟೀಲ್​, ಶಾಸಕರಾದ ಈಶ್ವರ ಖಂಡ್ರೆ, ಶಶೀಲ್​ ನಮೋಶಿ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವಿಶೇಷ ಅಧಿಕಾರಿ ಹಾಗೂ ಬೀದರ್​ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಆಯುಕ್ತ ಶಿವಕುಮಾರ್​ ಶೀಲವಂತ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net