ಮುಂಡಗೋಡದಲ್ಲಿ 3 ಶ್ರೀಗಂಧದ ಮರ ಕಳವು

MND SANDALWOOD
Published on

ಮುಂಡಗೋಡ: ಪಟ್ಟಣದ ಹುಬ್ಬಳ್ಳಿ ರಸ್ತೆಯ ಬಾಳಾ ವೆರ್ಣೆಕರ ಎಂಬುವವರ ಮನೆ ಆವರಣದಲ್ಲಿ ಬೆಳೆಸಿದ್ದ ಬೆಲೆ ಬಾಳುವ ಮೂರು ಶ್ರೀಗಂಧದ ಮರಗಳನ್ನು ಶುಕ್ರವಾರ ರಾತ್ರೋರಾತ್ರಿ ಕಳ್ಳರು ಕಡಿದು ಸಾಗಿಸಿರುವ ಘಟನೆ ನಡೆದಿದೆ.

ಪಟ್ಟಣ ಹುಬ್ಬಳ್ಳಿ ರಸ್ತೆಯ ಬಾಳಾ ವೆರ್ಣೆಕರ ಅವರ ಮನೆ ಮುಂದಿನ ಖುಲ್ಲಾ ಜಾಗದಲ್ಲಿ ಬೆಳೆದಿದ್ದ 30 ವರ್ಷದ ಶ್ರೀಗಂಧದ ಎರಡು ಮರ ಮತ್ತು ಡಾ.ಪಿ.ಪಿ. ಛಬ್ಬಿ ಅವರ ಮನೆ ಬಳಿಯ ಒಂದು ಮರ ಕಡಿದು ಸಾಗಿದ್ದಾರೆ.

ಶನಿವಾರ ಎಂದಿನಂತೆ ಮನೆಯ ಮಾಲೀಕರು ಬೆಳಗ್ಗೆ ಎದ್ದು ನೋಡಿದಾಗ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿರುವುದು ಬೆಳಕಿಗೆ ಬಂದಿದೆ. ಮರದ ಟೊಂಗೆ ಮತ್ತು ಬೇರನ್ನು ಬಿಟ್ಟು ಮಧ್ಯ ಭಾಗವನ್ನು ಕಡಿದು ಸಾಗಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ಪಡೆದು ಸ್ಥಳವನ್ನು ಪರಿಶೀಲಿಸಿದರು. ತಾಲೂಕಿನಲ್ಲಿ ಕೆಲ ದಿನಗಳಿಂದ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಪಟ್ಟಣ ಸಂತೆ ಮಾರುಕಟ್ಟೆ ಬಳಿ ಬೃಹತ್ ಶ್ರೀಗಂಧದ ಮರ ಕಡಿದು ಸಾಗಿಸಲು ವಿಫಲ ಯತ್ನ ನಡೆಸಲಾಗಿತ್ತು.

ಇದೀಗ ಮತ್ತೆ ಮೂರು ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿರುವುದು ಅರಣ್ಯ ಇಲಾಖೆಗೆ ತಲೆ ಬಿಸಿಯಾಗಿ ಪರಿಣಮಿಸಿದೆ. ಆದಷ್ಟು ಶೀಘ್ರ ಶ್ರೀಗಂಧ ಮರಗಳ್ಳರನ್ನು ಅರಣ್ಯ ಇಲಾಖೆಯವರು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net