ಜಿಲ್ಲೆಗೆ ಮತ್ತೆ ೩ ಇಂದಿರಾ ಕ್ಯಾಂಟೀನ್

3 more Indira canteens for the district
Published on

ಮಡಿಕೇರಿ:

ಕೊಡಗಿನಲ್ಲಿ ಹೊಸದಾಗಿ ಮೂರು ಇಂದಿರಾ ಕ್ಯಾಂಟೀನ್‌ಗಳ ಆರಂಭಕ್ಕೆ ಭರದ ಸಿದ್ಧತೆ ನಡೆದಿದೆ. ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸ ಆಗಬೇಕಿದೆ. ಇದೀಗ ಚುನಾವಣಾ ನೀತಿ ಸಂಹಿತೆ ಮುಗಿದಿರುವುದರಿಂದ ಬಹುನಿರೀಕ್ಷಿತ ಈ ಇಂದಿರಾ ಕ್ಯಾಂಟೀನ್‌ಗಳು ಸದ್ಯದಲ್ಲೇ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎನ್ನುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಾಳಜಿಯಿಂದ ರಾಜ್ಯಾದಂತ ಯಶಸ್ವಿಯಾಗಿ ನಡೆಯುತ್ತಿರುವ ಇಂದಿರಾ ಕ್ಯಾಂಟೀನ್ ದುಡಿಯುವ ವರ್ಗ, ಬಡವರು, ನಿರ್ಗತಿಕರು, ವಿದ್ಯಾರ್ಥಿಗಳ ಹಸಿವನ್ನು ನೀಗಿಸುವಲ್ಲಿ ದೊಡ್ಡ ಕೊಡುಗೆ ನೀಡುತ್ತಿದೆ. ಈ ಯೋಜನೆ ಹಲವು ಜನರ ಪಾಲಿಗೆ ಅಕ್ಷಯ ಪಾತ್ರೆ ಎನ್ನುವ ಮಾತು ಕೂಡ ಸಾಮಾನ್ಯ. ತಮಿಳುನಾಡಿನ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿ ೨೦೧೭ರ ಆ. ೧೬ರಂದು ರಾಜ್ಯದಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಲಾಯಿತು. ಶುರುವಿನಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಭಾಗದಲ್ಲಿ ಶುರುವಾದ ಇಂದಿರಾ ಕ್ಯಾಂಟೀನ್‌ಗಳು ನಂತರದ ದಿನಗಳಲ್ಲಿ ಎಲ್ಲಾ ಜಿಲ್ಲಾ ಕೇಂದ್ರಕ್ಕೂ ವಿಸ್ತರಣೆ ಆಗಿವೆ.

ಆರ್ಥಿಕವಾಗಿ ದುರ್ಬಲರಾದವರ ಹೊಟ್ಟೆಯನ್ನು ಪ್ರತಿದಿನವೂ ಕಡಿಮೆ ಖರ್ಚಿನಲ್ಲಿ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ತೋರಿಸಿತ್ತು ಎನ್ನುವ ಆರೋಪವಿದೆ. ಆದರೆ ಕಳೆದ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮತ್ತೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ’ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ, ಮುಚ್ಚಲ್ಪಟ್ಟಿದ ಇಂದಿರಾ ಕ್ಯಾಂಟೀನ್‌ಗಳನ್ನು ರಾಜ್ಯಾದ್ಯಂತ ಪುನಃ ಆರಂಭಿಸಲಾಗುವುದು’ ಎಂದು ಹೇಳಿದ್ದರು. ಈ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್‌ಗಳಿಗೆ ಮರುಜೀವ ಕೊಡುವ ಕೆಲಸವೂ ಶುರುವಾಗಿತ್ತು.
ಹಳೆಯ ಪರಿಕಲ್ಪನೆ ಜತೆಗೆ ಮತ್ತಷ್ಟು ಸದೃಢವಾಗಿ ಇಂದಿರಾ ಕ್ಯಾಂಟೀನ್ ಎದ್ದು ನಿಲ್ಲಲು ಬೇಕಾದ ವ್ಯವಸ್ಥೆ ಸರ್ಕಾರದ ಕಡೆಯಿಂದ ಆಗುತ್ತಿದೆ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ಗೆ ರಾಜ್ಯಾದ್ಯಂತ ಮರು ಜೀವ ಕೊಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರದ ಫಲವಾಗಿ ಹೊಸದಾಗಿ ೧೮೫ ಇಂದಿರಾ ಕ್ಯಾಂಟೀನ್‌ಗಳ ಆರಂಭಕ್ಕೆ ಸರ್ಕಾರ ಲೋಕಸಭಾ ಚುನಾವಣೆಗೂ ಮೊದಲೇ ಅನುಮೋದನೆ ಕೊಟ್ಟಿತ್ತು. ಇದರಲ್ಲಿ ಕೊಡಗಿನಲ್ಲಿ ನೂತನವಾಗಿ ಆರಂಭವಾಗಲಿರುವ ೩ ಇಂದಿರಾ ಕ್ಯಾಂಟೀನ್‌ಗಳೂ ಸೇರಿದ್ದವು.

ಕೊಡಗಿನಲ್ಲಿ ಈಗಾಗಲೇ ಜಿಲ್ಲಾ ಕೇಂದ್ರ ಮಡಿಕೇರಿಯ ಹೊಸ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಮತ್ತು ತಾಲೂಕು ಕೇಂದ್ರ ವಿರಾಜಪೇಟೆಯಲ್ಲಿ ೨೦೧೮ರಿಂದಲೇ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿವೆ. ಕಳೆದ ವರ್ಷ ಹೊಸ ಸರ್ಕಾರ ಬಂದ ನಂತರ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ಇನ್ನೂ ಮೂರು ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಇವು ಕೂಡ ಆರಂಭವಾದರೆ ಕೊಡಗಿನಲ್ಲಿ ಒಟ್ಟು ೫ ಇಂದಿರಾ ಕ್ಯಾಂಟೀನ್‌ಗಳು ಆರಂಭವಾದಂತಾಗಲಿದೆ. ಪೊನ್ನಂಪೇಟೆ ತಾಲೂಕಿನಲ್ಲೂ ಒಂದು ಇಂದಿರಾ ಕ್ಯಾಂಟೀನ್ ಶುರು ಮಾಡುವ ಆಲೋಚನೆ ಸರ್ಕಾರದ ಮುಂದಿದೆ.

ಮಡಿಕೇರಿಯಲ್ಲಿ ಹೊಸ ಖಾಸಗಿ ಬಸ್ ನಿಲ್ದಾಣದ ಬಳಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ಜನಸಂದಣಿಯಿಂದ ದೂರದಲ್ಲಿದ್ದು, ಹೆಚ್ಚಿನ ಜನರಿಗೆ ಉಪಯೋಗ ಆಗುತ್ತಿಲ್ಲ ಎನ್ನುವುದು ಸ್ಥಳೀಯರ ಕೊರಗು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಾಮಾನ್ಯವಾಗಿ ಹೆಚ್ಚು ಜನಸಂದಣಿ ಇರುವ ಕೊಡಗು ವೈದ್ಯಕೀಯ ವಿದ್ಯಾಲಯದ ಬೋಧಕ ಆಸ್ಪತ್ರೆ ಬಳಿ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಕೆಲವು ಪ್ರಜ್ಞಾವಂತರು ಬೇಡಿಕೆ ಮುಂದಿಟ್ಟಿದ್ದರು. ಇಲ್ಲಿ ಇಂದಿರಾ ಕ್ಯಾಂಟೀನ್ ಶುರುವಾದರೆ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಊಟ ಸಿಗುತ್ತದೆ. ಇಂದಿರಾ ಕ್ಯಾಂಟೀನ್‌ಗೆ ಹೆಚ್ಚು ಪ್ರಚಾರವೂ ಆಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಇದಕ್ಕೆ ಸ್ಪಂದಿಸಿದ್ದ ಶಾಸಕ ಡಾ. ಮಂತರ್ ಗೌಡ ಜಿಲ್ಲಾ ಆಸ್ಪತ್ರೆ ಬಳಿಯಲ್ಲೇ ಮಡಿಕೇರಿಯ ಮತ್ತೊಂದು ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ನಿರ್ಧರಿಸಿದ್ದು, ಇಲ್ಲಿಯೂ ಶೀಘ್ರವಾಗಿ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡಲಿದೆ.

ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ಇಂದಿರಾ ಕ್ಯಾಂಟೀನ್ ಶುರುವಾದಾಗಲೇ ಮತ್ತೊಂದು ಪ್ರಮುಖ ತಾಲೂಕು ಕೇಂದ್ರ ಸೋಮವಾರಪೇಟೆಯಲ್ಲೂ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸ್ಥಳೀಯರು ಬೇಡಿಕೆ ಇಟ್ಟಿದ್ದರು. ಸರ್ಕಾರದಿಂದ ಅನುಮೋದನೆಯೂ ಸಿಕ್ಕಿತ್ತು. ಈ ಬೆನ್ನಲ್ಲೇ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ಹೈ ಟೆಕ್ ಮಾರುಕಟ್ಟೆ ಬಳಿ ಜಾಗ ಗುರುತಿಸಿ ಅಡಿಪಾಯವನ್ನೂ ಹಾಕಲಾಗಿತ್ತು. ಆದರೆ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸೋಮವಾರಪೇಟೆಗೆ ಇಂದಿರಾ ಕ್ಯಾಂಟೀನ್‌ನ ಭಾಗ್ಯ ಸಿಕ್ಕಿರಲಿಲ್ಲ. ಆದರೆ ಸರ್ಕಾರದಿಂದ ಮತ್ತೆ ಇಲ್ಲಿಯೂ ಇಂದಿರಾ ಕ್ಯಾಂಟೀನ್‌ಗೆ ಅನುಮೋದನೆ ಕೊಟ್ಟಿದ್ದು, ಮೊದಲು ನಿರ್ಧರಿಸಿದ್ದ ಜಾಗದಲ್ಲೇ ಸ್ಥಾಪನೆಯಾಗಲಿದೆ.

ಜಿಲ್ಲೆಯ ನೂತನ ತಾಲೂಕು ಕೇಂದ್ರ ಕುಶಾಲನಗರ ಕೊಡಗಿನ ಶೈಕ್ಷಣಿಕ ರಾಜಧಾನಿಯಾಗಿ ಬೆಳೆಯುತ್ತಿದ್ದು, ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಇಲ್ಲಿಗೂ ಇಂದಿರಾ ಕ್ಯಾಂಟೀನ್ ಬೇಕು ಎನ್ನುವ ಬೇಡಿಕೆ ೨೦೧೮ರಲ್ಲೇ ಸ್ಥಳೀಯರು ಸರ್ಕಾರದ ಮುಂದೆ ಇಟ್ಟಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದಕ್ಕೆ ಕಾಲ ಕೂಡಿ ಬಂದಂತಾಗಿದೆ. ನಗರದ ಹೃದಯ ಭಾಗದಲ್ಲಿ ಇರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲೇ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡಲಿದೆ. ನಂದಿನಿ ಡೇರಿ ಪಕ್ಕದಲ್ಲೇ ಈ ಸಂಬಂಧ ಪೂರ್ವಭಾವಿ ಕೆಲಸಗಳು ಬಹುತೇಕ ಮುಗಿದಿದೆ. ಕಟ್ಟಡ ನಿರ್ಮಾಣ ಕಾರ್ಯವೂ ಆಗಿದೆ. ಸುಣ್ಣ, ಬಣ್ಣ ಹಚ್ಚುವುದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಸೇರಿದಂತೆ ಚಿಕ್ಕಪುಟ್ಟ ಕೆಲಸಗಳು ಮಾತ್ರ ಬಾಕಿ ಉಳಿದಿದೆ.

ಕುಶಾಲನಗರದಲ್ಲಿ ಆರಂಭವಾಗಲಿರುವ ಇಂದಿರಾ ಕ್ಯಾಂಟೀನ್ ಹಲವು ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ. ಇಲ್ಲಿ ಆಯಕಟ್ಟಿನ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ತಲೆ ಎತ್ತುತ್ತಿದ್ದು, ಅಗತ್ಯ ಇರುವವರಿಗೆ ದೊಡ್ಡ ಪ್ರಮಾಣದಲ್ಲಿ ಅನುಕೂಲ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಇಲ್ಲಿಯ ಸರ್ಕಾರಿ ಬಸ್ ನಿಲ್ದಾಣ ಜಿಲ್ಲೆಯ ಅತ್ಯಂತ ಹೆಚ್ಚು ಜನ ಸಂದಣಿಯ ಬಸ್ ನಿಲ್ದಾಣವಾಗಿದ್ದು ದಿನಂಪ್ರತಿ ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಾರೆ. ಸುತ್ತಮುತ್ತಲು ಆಟೋ ನಿಲ್ದಾಣಗಳಿವೆ. ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಬರುತ್ತಾರೆ. ಹಾಗಾಗಿ ಜಿಲ್ಲೆಯ ಇತರ ಭಾಗಗಳಲ್ಲಿನ ಇಂದಿರಾ ಕ್ಯಾಂಟೀನ್‌ಗಳಿಗೆ ಹೋಲಿಸದರೆ ಕುಶಾಲನಗರ ಇಂದಿರಾ ಕ್ಯಾಂಟೀನ್ ಬಗ್ಗೆ ಸ್ಥಳೀಯರಲ್ಲಿ ದೊಡ್ಡ ನಿರೀಕ್ಷೆಗಳಿದೆ.

ಕುಶಾಲನಗರ ಸರ್ಕಾರಿ ಬಸ್ ನಿಲ್ದಾಣದಲ್ಲಿ ಆರಂಭವಾಗಲಿರುವ ಇಂದಿರಾ ಕ್ಯಾಂಟೀನ್‌ಗೆ ನಮ್ಮ ಕಡೆಯಿಂದ ಎಲ್ಲಾ ರೀತಿಯ ಅನುಕೂಲತೆಗಳನ್ನು ಮಾಡಿಕೊಡಲಾಗಿದೆ. ಈಗಾಲೇ ಇಲ್ಲಿ ಕ್ಯಾಂಟೀನ್‌ಗೆ ಸಂಬಂಧಿಸಿದ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಕಟ್ಟಡದಲ್ಲಿ ಚಿಕ್ಕಪುಟ್ಟ ಕೆಲಸಗಳು ಬಾಕಿ ಇದೆ. ಕ್ಯಾಂಟೀನ್‌ಗೆ ಅಗತ್ಯವಿರುವ ಪಾತ್ರೆ ಸೇರಿದಂತೆ ಇತರ ವ್ಯವಸ್ಥೆಗಳಿಗಾಗಿ ಟೆಂಡರ್ ಆಗಿದೆ. ಈಗ ಚುನಾವಣಾ ನೀತಿ ಸಂಹಿತೆ ಮುಗಿದಿರುವುದರಿಂದ ಆದಷ್ಟು ಶೀಘ್ರ ಇಲ್ಲಿ ಇಂದಿರಾ ಕ್ಯಾಂಟೀನ್ ಶುರುಮಾಡುವುದಕ್ಕೆ ಸಂಬಂಧಿಸಿದಂತೆ ಶಾಸಕರು ಪ್ರಯತ್ಮ ಮುಂದುವರಿಸಿದ್ದಾರೆ. ಸದ್ಯದಲ್ಲೇ ಸ್ಥಳೀಯರು ಇಂದಿರಾ ಕ್ಯಾಂಟಿನ್ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಕೃಷ್ಣಪ್ರಸಾದ್, ಮುಖ್ಯಾಧಿಕಾರಿ, ಪುರಸಭೆ, ಕುಶಾಲನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net