3 ಏತ ನೀರಾವರಿ ಯೋಜನೆ ಸ್ಥಗಿತ

Eta Neeravari
Published on

ನರಗುಂದ: ಬರಗಾಲದಲ್ಲಿ ರೈತರಿಗೆ ವರವಾಗಬೇಕಿದ್ದ ಕರ್ನಾಟಕ ನೀರಾವರಿ ನಿಗಮದ 3 ಏತ ನೀರಾವರಿ ಯೋಜನೆಗಳು ಅಧಿಕಾರಿಗಳ ನಿಷ್ಕಾಳಜಿಯಿಂದ ಕಾರ್ಯ ಸ್ಥಗಿತಗೊಂಡಿವೆ. ಜತೆಗೆ ನೀರಾವರಿ ನಿಗಮದ ಕಾರ್ಯಾಗಾರ ಹಾಗೂ ತಾಂತ್ರಿಕ ಉಪವಿಭಾಗ ಕಚೇರಿಯಲ್ಲಿ ಅಧಿಕಾರಿಗಳಿಲ್ಲದೆ ರೈತರಿಗೆ ಸಮಸ್ಯೆಯಾಗಿದೆ.
ಮಲಪ್ರಭಾ ಎಡದಂಡೆ ವ್ಯಾಪ್ತಿಗೊಳಪಡುವ ಇಲ್ಲಿನ ವರ್ಕ್‌ಶಾಪ್ ಮತ್ತು ಮೆಕಾನಿಕಲ್ ಸಬ್ ಡಿವಿಜನ್ ವಿಭಾಗದಿಂದ 1976ರಲ್ಲಿ ಬಾದಾಮಿ ತಾಲೂಕಿನ ಹೆಬ್ಬಳ್ಳಿ, 1978ರಲ್ಲಿ ಚೋಳಚಗುಡ್ಡ, 1969ರಲ್ಲಿ ಜಕನೂರ ಸೇರಿ ಒಟ್ಟು,3 ಏತ ನೀರಾವರಿ ಜಾಕ್‌ವೆಲ್ ನಿರ್ಮಿಸಲಾಗಿದ್ದು, ಸದ್ಯ ಎಲ್ಲವೂ ಬಂದ್ ಆಗಿವೆ.

70 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೆಬ್ಬಳ್ಳಿ ಜಾಕ್‌ವೆಲ್‌ನಿಂದ 39 ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸಲು 980 ಮೀಟರ್ ಕಾಲುವೆ ನಿರ್ಮಿಸಲಾಗಿದೆ. 2.41 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಚೋಳಚಗುಡ್ಡ ಏತ ನೀರಾವರಿಯಿಂದ 64 ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸಲು 1200 ಮೀಟರ್ ಕಾಲುವೆ ನಿರ್ಮಿಸಿದೆ. 1.25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಜಕನೂರ ಏತ ನೀರಾವರಿ ಯೋಜನೆಯಿಂದ 80 ಹೆಕ್ಟೆರ್ ಪ್ರದೇಶಕ್ಕೆ ನೀರೊದಗಿಸಲು 960 ಮೀಟರ್ ಕಾಲುವೆ ನಿರ್ಮಿಸಿದೆ.

ಮೂರು ಏತ ನೀರಾವರಿ ಯೋಜನೆಗಳಿಂದ ಒಟ್ಟು,183 ಹೆಕ್ಟೇರ್ ಪ್ರದೇಶಕ್ಕೆ ತಾಲೂಕಿನ ಕೊಣ್ಣೂರ ಬಳಿಯ ಮಲಪ್ರಭಾ ನದಿಯಿಂದ ನಿರಂತರ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೀಗ ಮೂರೂ ಯೋಜನೆ ಅತ್ಯಂತ ಹಳೆಯದಾಗಿದ್ದಲ್ಲದೆ ಅಧಿಕಾರಿಗಳ ನಿಷ್ಕಾಳಜಿತನ, ನಿರ್ವಹಣೆ ಕೊರತೆಯಿಂದ ಯಂತ್ರಗಳು ಸಂಪೂರ್ಣ ತುಕ್ಕು ಹಿಡಿದು ಸೇವೆಯನ್ನೇ ಸ್ಥಗಿತಗೊಳಿಸಿವೆ. ಪರಿಣಾಮ ಈ ಮೂರು ಏತ ನೀರಾವರಿ ಯೋಜನೆಗಳನ್ನೇ ನಂಬಿ ಕೃಷಿ ಚಟುವಟಿಕೆ ನಡೆಸುತ್ತಿದ್ದ ರೈತರ ಜಮೀನಿಗೆ ಸಮರ್ಪಕ ನೀರಿಲ್ಲದಂತಾಗಿ ಆಘಾತ ಎದುರಿಸುವಂತಾಗಿದೆ. ‘ಪ್ರತಿ ಏತ ನೀರಾವರಿ ಯೋಜನೆಗೆ ಪ್ರತಿವರ್ಷ ಬಿಡುಗಡೆಗೊಂಡ 1.50 ರಿಂದ 2ಲಕ್ಷ ರೂಪಾಯಿ ನಿರ್ವಹಣೆ ಹಣ ದುರುಪಯೋಗವಾಗಿದೆ. ಆದರೆ, ಕಡತಗಳಲ್ಲಿ ಮಾತ್ರ ಎಲ್ಲವೂ ಸರಿ ಇರುವುದಾಗಿ ನಮೂದಿಸಿ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ’ ಎಂದು ರೈತರು ದೂರುತ್ತಿದ್ದಾರೆ.

ಎರಡ್ಮೂರು ವರ್ಷಗಳಿಂದ ಎಲ್ಲ ಘಟಕಗಳು ಶಿಥಿಲಗೊಂಡಿದ್ದು, ದುರಸ್ತಿಪಡಿಸುವಂತೆ ಸರ್ಕಾರದ ಸರ್ವೇ ಟೀಂಗೆ ಈಗಿನ ಅಧಿಕಾರಿಗಳ ಮನವಿ ಮಾಡಿದ್ದರು. ಇ.ಐ ಟೆಕ್ನಾಲಜಿ ಅಧಿಕಾರಿಗಳ ತಂಡ ಮೇ 2ರಂದು ಸರ್ವೇ ಕಾರ್ಯ ಪೂರ್ಣಗೊಳಿಸಿ ಸರ್ಕಾರ ಹಾಗೂ ನೀರಾವರಿ ನಿಗಮದ ಮೇಲಧಿಕಾರಿಗಳಿಗೆ ವರದಿ ನೀಡಿದ್ದಾರೆ. ಸರ್ಕಾರದ ಕೈಗೊಳ್ಳುವ ನಿರ್ಣಯವನ್ನು ರೈತರು ಆಸೆಗಣ್ಣಿನಿಂದ ನೋಡುವಂತಾಗಿದೆ.

ಹುದ್ದೆಗಳು ಖಾಲಿ

ನಿಗಮದ ಕಾರ್ಯಾಗಾರ ಹಾಗೂ ತಾಂತ್ರಿಕ ಉಪವಿಭಾಗ ಕಚೇರಿಯಲ್ಲಿ 3 ಸಹಾಯಕ ಇಂಜಿನಿಯರ್ ಪೈಕಿ ಕೇವಲ ಒಬ್ಬ ಇಂಜಿನಿಯರ್ ಇದ್ದಾರೆ. 2 ದ್ವಿತೀಯ ದರ್ಜೆ ಸಹಾಯಕರ ಪೈಕಿ ಒಂದು ಖಾಲಿ ಇದೆ. 3 ಕಿರಿಯ ಇಂಜಿನೀಯರ್, 1 ಪ್ರಥಮ ದರ್ಜೆ ಸಹಾಯಕ, 1 ಬೆರಳಚ್ಚುಗಾರ, 1 ವಾಹನ ಚಾಲಕರ ಹುದ್ದೆ ಸುಮಾರು ವರ್ಷಗಳಿಂದ ಖಾಲಿ ಇವೆ. ಇರುವವರಲ್ಲಿ ಕೆಲವರು ಕರ್ತವ್ಯಕ್ಕೆ ಗೈರು ಹಾಜರಾಗುತ್ತಾರೆ ಎಂಬ ದೂರುಗಳಿವೆ.

ನರಗುಂದ ನೀರಾವರಿ ನಿಗಮದ ಅಧಿಕಾರಿಗಳಿಗೆ ಹೇಳೋರು, ಕೇಳೋರು ಯಾರೂ ಇಲ್ಲದಂತಾಗಿದೆ. ಯಾವುದೇ ಕೆಲಸಕ್ಕೆ ತೆರಳಿದರೆ ಕರ್ತವ್ಯನಿರತ ಬೆರಳೆಣಿಕೆ ಅಧಿಕಾರಿಗಳು ಕುಂಟು ಕಾರಣಗಳಿಂದ ಹೊರಗಡೆ ಅಲೆಯುತ್ತಿರುತ್ತಾರೆ ಹೊರತು ರೈತರ ಸಮಸ್ಯೆಗೆ ಕಿಂಚಿತ್ತೂ ಸ್ಪಂದಿಸುವುದಿಲ್ಲ.I ವಿಠ್ಠಲ ಜಾಧವ, ರೈತ ಸಂಘ-ಹಸಿರು ಸೇನೆ ತಾಲೂಕು ಅಧ್ಯಕ್ಷ. ನರಗುಂದ ನೀರಾವರಿ ನಿಗಮದ ಕಾರ್ಯಾಗಾರ ಹಾಗೂ ತಾಂತ್ರಿಕ ಉಪ ವಿಭಾಗದ ವ್ಯಾಪ್ತಿಗೊಳಪಡುವ ಮೂರು ಏತ ನೀರಾವರಿ ಯೋಜನೆ ಪುರುಜ್ಜೀವನಗೊಳಿಸುವಂತೆ ಮೇಲಧಿಕಾರಿಗಳಿಗೆ ಸರ್ವೇ ವರದಿ ಸಲ್ಲಿಸಲಾಗಿದೆ. ನಮ್ಮಲ್ಲಿ ಯಾವುದೇ ಅನುದಾನವಿಲ್ಲ. ಇಲಾಖೆಯ ಬಹುತೇಕ ಹುದ್ದೆಗಳು ಖಾಲಿ ಇರುವುದರಿಂದ ಕೆಲ ಸಣ್ಣಪುಟ್ಟ ಸಮಸ್ಯೆಗಳಾಗಿವೆ. ಸರ್ಕಾರದಿಂದ ಅನುದಾನ ದೊರೆತರೆ ಮೂರೂ ಏತ ನೀರಾವರಿ ಯೋಜನೆ ಘಟಕಗಳನ್ನು ನಿಗದಿತ ಅವಧಿಯೊಳಗೆ ಪುನರುಜ್ಜೀವನಗೊಳಿಸಲಾಗುವುದು. I ಯೋಗಿರಾಜ್ ಟಿ.ಎಂ., ಎಇಇ ನರಗುಂದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net