

ಮೈಸೂರು: ತಾಲೂಕಿನ ಆಯರಹಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಕಂಡುಬಂದ 3 ಚಿರತೆ ಮರಿಗಳನ್ನು ರಕ್ಷಿಸಲಾಗಿದೆ.
ಗ್ರಾಮದ ದ್ಯಾವಣ್ಣನಾಯಕ ಎಂಬುವವರ ಜಮೀನಿನಲ್ಲಿ ಬುಧವಾರ ರೈತರು ಕಬ್ಬು ಕಟಾವು ಮಾಡುವ ವೇಳೆ ಚಿರತೆ ಮರಿಗಳು ಕಾಣಿಸಿಕೊಂಡಿದ್ದು, 3 ಮರಿಗಳ ಪೈಕಿ 1 ಕಪ್ಪು ಬಣ್ಣದ ಚಿರತೆ ಮರಿಯಾಗಿದೆ. ರೈತರು ಚಿರತೆ ಮರಿಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಆಸುಪಾಸಿನಲ್ಲೇ ತಾಯಿ ಚಿರತೆ ಇರಬಹುದೆಂದು ರೈತರು ಭಯಭೀತರಾಗಿದ್ದು, ಕೃಷಿ ಚಟುವಟಿಕೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಏತನ್ಮಧ್ಯೆ ಮೈಸೂರು ತಾಲೂಕಿನ ಚಿಕ್ಕಕಾನ್ಯ, ದೊಡ್ಡಕಾನ್ಯ, ಬ್ಯಾತಹಳ್ಳಿ, ಸಿಂಧುವಳ್ಳಿ, ಟಿವಿಎಸ್ ಫ್ಯಾಕ್ಟರಿ ಹಿಂಭಾಗದಲ್ಲಿ ಹುಲಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಹುಲಿ ಸೆರೆ ಕಾರ್ಯಾಚರಣೆ ಮುಂದುವರಿದಿದೆ. ಹುಲಿ ಸೆರೆಗೆ ಬೋನು ಇರಿಸಿದ್ದರೂ ಪ್ರಯೋಜನವಾಗಿಲ್ಲ. ಟ್ಯ್ರಾಪ್ ಕ್ಯಾಮರಾದ ದೃಶ್ಯ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಹುಡುಕಾಟ ಮುಂದುವರಿಸಿದ್ದಾರೆ.
ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎಸ್.ಬಸವರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಲಕ್ಷ್ಮೀಕಾಂತ, ವಲಯ ಅರಣ್ಯಾಧಿಕಾರಿ ಕೆ.ಸುರೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ವಿಶೇಷ ತಂಡದಲ್ಲಿ ಚಿರತೆ ಕಾರ್ಯಪಡೆಯ 10 ಸಿಬ್ಬಂದಿ, ಮೈಸೂರು ವಲಯದ 20 ಸಿಬ್ಬಂದಿ, ನಗರ ಹಸಿರೀಕರಣ ವಲಯದ 10 ಸಿಬ್ಬಂದಿ, ನಂಜನಗೂಡು ವಲಯದ 10 ಸಿಬ್ಬಂದಿ, ಜತೆಗೆ ವಿವಿಧ ಬಗೆಯ ಒಟ್ಟು 35 ಕ್ಯಾಮರಾಗಳನ್ನು ಬಳಸಿಕೊಳ್ಳಲಾಗಿದೆ. ಡ್ರೋನ್ ಕ್ಯಾಮರಾ ಸಹ ಬಳಸಿಕೊಂಡು ಹುಲಿ ಹುಡುಕಾಟ ನಡೆಸಲಾಗುತ್ತಿದೆ. ಪ್ರತ್ಯೇಕವಾಗಿ ಮೂರು ಕಡೆ ಬೋನು ಇರಿಸಲಾಗಿದೆ. ಮೈಸೂರು ವಲಯದ ವ್ಯಾಪ್ತಿಯ ಎಲ್ಲ ರೈತರು ಹಾಗೂ ಸ್ಥಳೀಯರ ಮೊಬೈಲ್‌ಗೆ ಹುಲಿ ಇರುವಿಕೆ ಬಗ್ಗೆ ಮಾಹಿತಿ ನೀಡಲಾಗಿದ್ದು, ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.