

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನೆಲಮಂಗಲ ತಾಲೂಕು ಕಂಬಾಳುಗೊಲ್ಲರಹಟ್ಟಿ ಭಾಗದಲ್ಲಿ ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಬುಧವಾರ ಮತ್ತೊಂದು ಚಿರತೆ ಸೆರೆಯಾಗಿದ್ದು, ಇಲ್ಲಿಗೆ 10 ದಿನಗಳ ಸತತ ಕಾರ್ಯಾಚರಣೆಯಲ್ಲಿ ಬೋನಿಗೆ ಬಿದ್ದ ಮೂರನೇ ಚಿರತೆ ಇದಾಗಿದೆ. ಇದುವರೆಗೆ ಸೆರೆಯಾದ ಚಿರತೆಗಳ ಪೈಕಿ 2 ಗಂಡು ಹಾಗೂ 1 ಗಂಡು ಚಿರತೆಯಾಗಿದ್ದು, ಮೂರನ್ನೂ ಬನ್ನೇರುಘಟ್ಟದ ಜೈವಿಕ ಉದ್ಯಾನಕ್ಕೆ ರವಾನಿಸಲಾಗಿದೆ.
ಕರಿಯಮ್ಮರನ್ನು ಕೊಂದ ಚಿರತೆ ಯಾವುದು? ಸರಣಿಯಾಗಿ ಚಿರತೆಗಳು ಸೆರೆಯಾಗುತ್ತಿವೆ ಆದರೆ ಸೆರೆ ಸಿಕ್ಕ ಚಿರತೆಗಳ ಪೈಕಿ ಯಾವ ಚಿರತೆ ಕರಿಯಮ್ಮ ಅವರನ್ನು ಬಲಿ ಪಡೆದಿದೆ ಎಂಬುದು ಖಚಿತವಾಗಿಲ್ಲ. ಅದು ಖಚಿತವಾಗುವವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸುವಂತಿಲ್ಲ ಎಂಬ ಪರಿಸ್ಥಿತಿ ಇದೆ. ಏನತ್ಮಧ್ಯೆ ಕರಿಯಮ್ಮ ಅವರ ಮರಣೋತ್ತರ ಪರೀಕ್ಷೆ ವರದಿ ಅರಣ್ಯ ಇಲಾಖೆಗೆ ತಲುಪದಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬುಧವಾರ ಸೆರೆ ಸಿಕ್ಕ ಚಿರತೆಯ ರಕ್ತ, ಕೂದಲು ಹಾಗೂ ಜೊಲ್ಲಿನ ಮಾದರಿಯನ್ನು ಪ್ರಯೋಗಾಲಕ್ಕೆ ಕಳುಹಿಸಿಕೊಡಲಾಗಿದೆ. ಕರಿಯಮ್ಮ ಅವರ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಸೆರೆ ಸಿಕ್ಕ ಚಿರತೆಗಳ ಎ್ಎಸ್‌ಎಲ್ ವರದಿ ಆಧರಿಸಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಲು ಇಲಾಖೆ ಬೆವರು ಹರಿಸುತ್ತಿದೆ.
ಏನಿದು ಪ್ರಕರಣ? ನ.18ರಂದು ಕಂಬಾಳುಗೊಲ್ಲರಹಟ್ಟಿ ಗ್ರಾಮದ ಕರಿಯಮ್ಮ ಎಂಬುವರು ಜಮೀನಿನಲ್ಲಿ ಹುಲ್ಲು ಕುಯ್ಯುವ ವೇಳೆ ಚಿರತೆ ದಾಳಿ ನಡೆಸಿತ್ತು. ಸುಮಾರು 200 ಮೀಟರ್ ದೂರಕ್ಕೆ ಎಳೆದೊಯ್ದು ಕರಿಯಮ್ಮನ ತಲೆಯನ್ನು ಭಕ್ಷಣೆ ಮಾಡಿತ್ತು. ಈ ಸುದ್ದಿಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ವಿಷಯ ತಿಳಿದ ಕೂಡಲೇ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆ ರೂಪಿಸಿದ್ದರು.
ಹುಣಸೇಹಳ್ಳದ ಬಳಿ ಸೆರೆ: ಕರಿಯಮ್ಮ ಅವರನ್ನು ಕೊಂದ ಸ್ಥಳದ ಕೂಗಳತೆ ದೂರದಲ್ಲಿ ಇಟ್ಟಿದ ಬೋನಿಗೆ ಮೊದಲಿಗೆ ಗಂಡು ಚಿರತೆ ಸೆರೆಯಾಗಿತ್ತು. ನಂತರದಲ್ಲಿ ಮುದ್ದೀರೇಶ್ವರ ದೇವಸ್ಥಾನದ ಬಳಿ ಹೆಣ್ಣು ಚಿರತೆ ಸೆರೆ ಸಿಕ್ಕಿತ್ತು. ಬುಧವಾರ ಶಿವಗಂಗೆ ಬೆಟ್ಟದ ಹಿಂಬದಿಯ ಹುಣಸೇಹಳ್ಳ ಸಮೀಪದ ಹತ್ತಿರ ಇಟ್ಟಿದ್ದ ಬೋನಿನಲ್ಲಿ ಸಂಜೆ 4.30ರ ಸುಮಾರಿನಲ್ಲಿ ಗಂಡು ಚಿರತೆ ಸೆರೆಯಾಗಿದೆ. ಇದರಿಂದ ಒಂದು ಕಡೆ ಗ್ರಾಮಸ್ಥರು ನಿಟ್ಟಿಸಿರು ಬಿಡುತ್ತಿದ್ದರು. ಚಿರತೆಗಳು ಒಂದರ ಹಿಂದೆ ಸೆರೆಯಾಗುತ್ತಿರುವುದು ಮತ್ತಷ್ಟು ಚಿರತೆಗಳಿರಬಹುದೆಂಬ ಆತಂಕ ಹೆಚ್ಚಿಸಿದೆ.
ಪರಿಹಾರ ಚೆಕ್ ವಿತರಣೆಗೆ ತಡೆ: ಒಂದು ಕಡೆ ಚಿರತೆಗಳ ಸೆರೆ ಕಾರ್ಯಾಚರಣೆ ಮುಂದುವರೆದಿದೆ ಮತ್ತೊಂದು ಕಡೆ ಕರಿಯಮ್ಮ ಅವರ ಕುಟುಂಬಕ್ಕೆ ನೀಡಬೇಕಾದ ಪರಿಹಾರ ಚೆಕ್ ವಿತರಣೆ ತಡವಾಗುತ್ತಿದೆ. ಕರಿಯಮ್ಮ ಕುಟುಂಬದಲ್ಲಿ ಯಾರಿಗೆ ಕೊಡಬೇಕು ಎಂಬ ಗೊಂದಲವೂ ಇದೆ ಎನ್ನಲಾಗಿದೆ. ಅರಣ್ಯ ಇಲಾಖೆಗೆ ಚೆಕ್ ಬಂದಿದ್ದು, ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರು ಚಿರತೆಗಳ ದೃಶ್ಯ: ಕರಿಯಮ್ಮ ಪ್ರಕರಣ ನಂತರ ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಎರಡು ಗಂಡು ಹಾಗೂ ಒಂದು ಹೆಣ್ಣು ಚಿರತೆ ಸಂಚಾರದ ದೃಶ್ಯಗಳು ಕಂಡುಬಂದಿದ್ದವು. ಆದಾದ ಬಳಿಕ ಕರಡಿಯೊಂದು ಬಿಟ್ಟರೆ ಮತ್ಯಾವ ಮೃಗಗಳ ದೃಶ್ಯಗಳು ಕಂಡುಬಂದಿಲ್ಲ. ಆದ್ದರಿಂದ ಕರಿಯಮ್ಮನನ್ನು ಸೆರೆಸಿಕ್ಕಿರುವ ಈ ಮೂರು ಚಿರತೆಗಳಲ್ಲಿ ಒಂದು ಚಿರತೆಯಾಗಿರಬಹುದು ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಶಂಕೆಯಾಗಿದೆ.
---------
ಕರಿಯಮ್ಮ ಅವರನ್ನು ಚಿರತೆ ಕೊಂದ ಪ್ರಕರಣ ಬಳಿಕ ಅರಣ್ಯ ಇಲಾಖೆ ಸತತ ಕಾರ್ಯಾಚರಣೆ ಮೂಲಕ ಮೂರು ಚಿರತೆಗಳನ್ನು ಸೆರೆ ಹಿಡಿದಿದ್ದಾರೆ. ಆದರೆ ಕರಿಯಮ್ಮ ಅವರನ್ನು ಕೊಂದ ಚಿರತೆ ಯಾವುದು ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ಏಕೆಂದರೆ ಮನುಷ್ಯರ ರಕ್ತದ ರುಚಿ ಕಂಡ ಕಾಡುಮೃಗಗಳು ಮತ್ತೆ ದಾಳಿ ನಡೆಸಬಹುದು ಎಂಬ ಆತಂಕವಿದೆ. ಆದಷ್ಟು ಬೇಗ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ.
ಶ್ರೀನಿವಾಸ್, ಶಿವಗಂಗೆ ನಿವಾಸಿ
------------
ಒಂದರ ಹಿಂದೆ ಒಂದರಂತೆ ಚಿರತೆಗಳು ಸೆರೆಯಾಗುತ್ತಿರುವುದು ಗಮನಿಸಿದರೆ ಈ ಭಾಗದಲ್ಲಿ ಸಾಕಷ್ಟು ಚಿರತೆಗಳಿರಬಹುದು ಎಂಬ ಆತಂಕವಿದೆ. ಸಂಜೆ ಬಳಿಕ ಹೊಲಗದ್ದೆಗಳ ಕಡೆ ಹೋಗಿಬರಲು ಭಯವಾಗುತ್ತಿದೆ. ಕುರಿ, ಮೇಕೆ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಗಳು ಇದೀಗ ಮನುಷ್ಯರ ಮೇಲೂ ದಾಳಿ ನಡೆಸುತ್ತಿರುವುದರಿಂದ ಜೀವ ಭಯ ಎದುರಾಗಿದೆ.
ಶಾಂತಮ್ಮ, ಕಂಬಾಳುಗೊಲ್ಲರಹಟ್ಟಿ ನಿವಾಸಿ