

ಹುಬ್ಬಳ್ಳಿ: ಬಂಗಾರದ ಗುಂಡಿನ ಸರವೆಂದು ನಂಬಿಸಿ ಮಹಿಳೆಯೊಬ್ಬರಿಗೆ ತಾಮ್ರದ ಗುಂಡಿನ ಸರ ನೀಡಿ 3 ಲಕ್ಷ ರೂ. ಲಪಟಾಯಿಸಿದ್ದರ ಕುರಿತು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾನಗರದ ಭಾರತಿ ಕಾಲನಿಯ ಫ್ಯಾನ್ಸಿ ಅಂಗಡಿಗೆ ಕೆಲವರೊಂದಿಗೆ ಬಂದ ವ್ಯಕ್ತಿಯೊಬ್ಬ, ಮಹಿಳೆಯ ಜತೆಗೆ ಮಾತನಾಡಿದ್ದಾನೆ. ಜೆಸಿಬಿ ಮೂಲಕ ನೆಲ ಅಗೆಯುವಾಗ ಹೂಜಿ ಸಿಕ್ಕಿದೆ. ಅದರಲ್ಲಿ ಬಂಗಾರದ ಗುಡಿನ ಸರ ಮತ್ತು ಹಳೆಯ ನಾಣ್ಯಗಳಿವೆ. ಇವು ಮಾರಾಟ ಮಾಡಲು ನಮಗೆ ಭಾಷೆ ಸಮಸ್ಯೆಯಾಗಿದೆ. ನನ್ನ ಮಗಳ ಮದುವೆ ಮತ್ತು ಚಿಕ್ಕಪ್ಪನ ಹಾರ್ಟ್ ಆಪರೇಷನ್ ಮಾಡಿಸಬೇಕಿದೆ. ಹಣದ ಸಮಸ್ಯೆ ಇದೆ. ನಿಮ್ಮದು ಫ್ಯಾನ್ಸಿ ಅಂಗಡಿ ಇದೆ. ಇವು ತೆಗೆದುಕೊಳ್ಳಿ ಎಂದು ಮಹಿಳೆಗೆ ಸರ ನೀಡಿದ್ದಾನೆ. ಬಂಗಾರದ ಸರ ಇರಬಹುದೆಂದು ನಂಬಿ, 3 ಲಕ್ಷ ರೂ. ಕೊಟ್ಟಿದ್ದಾಳೆ. ನಂತರ ನೋಡಿದಾಗ ಇದು ತಾಮ್ರದ ಗುಂಡಿನ ಸರವಾಗಿದ್ದರಿಂದ ವಿದ್ಯಾನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾಳೆ.