

ಕೊಳ್ಳೇಗಾಲ : ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ನೂತನವಾಗಿ ಆರಂಭಗೊಂಡ ನಂದಿನಿ ಮಿಲ್ಕ್ ಪಾರ್ಲರ್ ಕೇಂದ್ರಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಹಾಲು ಉತ್ಪಾದಕರ ಒಕ್ಕೂಟದಿಂದ ಇಂದು ರಾಜ್ಯಾದ್ಯಂತ 500ಕ್ಕೂ ಹೆಚ್ಚು ನಂದಿನಿ ಮಿಲ್ಕ್ ಪಾಲರ್‌ಗಳನ್ನು ಏಕಕಾಲದಲ್ಲಿ ಉದ್ಘಾಟನೆಗೊಳ್ಳುತ್ತಿವೆ. ಅಂತೆಯೇ, ಕೊಳ್ಳೇಗಾಲ ಪಟ್ಟಣದಲ್ಲಿ ಇಂದಿರಾ ರಾಜಶೇಖರ್ ಅವರ ಮಾಲೀಕತ್ವದಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಆರಂಭಗೊಂಡಿದೆ. 1997 ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ದಿವಂಗತ ಎಚ್.ಎಸ್.ಮಹದೇವ ಪ್ರಸಾದ್ ಹೋರಾಟದ ಫಲವಾಗಿ ಚಾಮರಾಜನಗರ ಹಾಲು ಒಕ್ಕೂಟ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಿಂದ ಬೇರ್ಪಟ್ಟಿತು. ಇದು ನಮ್ಮ ಜಿಲ್ಲೆಯ ಹಾಲು ಉತ್ಪಾದಕರಿಗೆ ವರದಾನವಾಯಿತು. ಚಾಮುಲ್ ಆರಂಭಗೊಂಡಾಗ ಅಷ್ಟೊಂದು ಪ್ರಗತಿದಾಯಕವಾಗಲ್ಲ ಎಂದು ಸಂಶಯ ವ್ಯಕ್ತವಾಗಿತ್ತು. ಆದರೆ ಇಂದು ನಿರೀಕ್ಷೆಗೂ ಮೀರಿ ಪ್ರಗತಿ ಕಾಣುತ್ತಿದೆ. 2024-25ನೇ ಸಾಲಿನಲ್ಲಿ ಒಟ್ಟು 498.64 ಕೋಟಿ ರೂ. ವಹಿವಾಟು ನಡೆಸಿ 3.34 ಕೋಟಿ ರೂ. ಲಾಭ ಗಳಿಸಿದೆ. ಪ್ರತಿ ದಿನ 3 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವುದರಿಂದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಸಹಕಾರ ಪಡೆದು ನಮ್ಮ ಈ ಒಕ್ಕೂಟದಿಂದ ಐಸ್‌ಕ್ರೀಂ ಉತ್ಪಾದನಾ ಘಟಕ ಮತ್ತು ಕುಡಿಯುವ ನೀರಿನ ಬಾಟಲ್ ಉತ್ಪಾದನೆಯನ್ನು ತೆರೆಯಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ಕೊಡಿಸಲು ಆಲೋಚಿಸಲಾಗಿದೆ. ನಮ್ಮ ಕೇಂದ್ರದಿಂದ ಈಗಾಗಲೇ ಮಲೆ ಮಹದೇಶ್ವರ ಬೆಟ್ಟ ಹಾಗೂ ತಿರುಪತಿಯಲ್ಲಿ ಲಾಡು ತಯಾರಿಕೆಗೆ ನಮ್ಮಲ್ಲಿ ತಯಾರಾದ ತುಪ್ಪವನ್ನು ಕಳುಹಿಸಿಕೊಡಲಾಗಿದೆ. ಅಲ್ಲದೆ, ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಪ್ರತಿದಿನ 30 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದೆ. ನಮ್ಮ ಒಕ್ಕೂಟದ ಲಾಭಾಂಶದಲ್ಲಿ ರೈತರಿಗೂ ಹಾಲಿನ ದರವನ್ನು ಇತರ ಕೇಂದ್ರಕ್ಕಿಂತ ಹೆಚ್ಚು ಮಾಡಲಾಗಿದ್ದು ರೈತರಿಗೂ ಅನುಕೂಲವಾಗಿದೆ ಎಂದು ತಿಳಿಸಿದರು.
ಒಕ್ಕೂಟದ ಎಂಡಿ ರಾಜ್‌ಕುಮಾರ್, ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸದಸ್ಯರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಜೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಜಿಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವ ನಾಯಕ, ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚೇತನ್ ದೊರೈರಾಜ್ ಮತ್ತಿತರಿದ್ದರು.