ಸೌರವಿದ್ಯುತ್​ಗಾಗಿ 3 ಲಕ್ಷ ಮರಕ್ಕೆ ಕೊಡಲಿ

2
ಗುಬ್ಬಿ ಮತ್ತು ಚಿಕ್ಕನಾಯಕನಹಳ್ಳಿ ಅರಣ್ಯ ಪ್ರದೇಶ.
Published on

ಜಿಲ್ಲಾಧಿಕಾರಿಗಳ ಕ್ರಮಕ್ಕೆ ವನ್ಯಜಿವಿ ಜಾಗೃತಿ ನಿಸರ್ಗ ಸಂಸ್ಥೆ ತೀವ್ರ ಆಕ್ರೋಶ

ತುಮಕೂರು: ಜಿಲ್ಲೆಯ ಗುಬ್ಬಿ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಮಾಳ ಜಾಗದಲ್ಲಿ ಸೌರ ವಿದ್ಯುತ್​ ಘಟಕ ಸ್ಥಾಪನೆ ಮಾಡಲು 3 ಲಕ್ಷ ಮರ ಕಡಿಯಲು ಮುಂದಾಗಿರುವ ಜಿಲ್ಲಾಧಿಕಾರಿಗಳ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.

ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಶಿವಸಂದ್ರದ ಸರ್ವೇ ನಂ-.45ರಲ್ಲಿ 135 ಎಕರೆ, ಸಿ.ಎಸ್​. ಪುರ ಹೋಬಳಿ ಬೋರಪ್ಪನಹಳ್ಳಿ ಸರ್ವೇ ನಂ.-38ರಲ್ಲಿ 12.32 ಎಕರೆ, ನಾರನಹಳ್ಳಿಯ ಸರ್ವೇ ನಂ.26ರಲ್ಲಿ 18.20 ಎಕರೆ, ಹಾಗಲವಾಡಿ ಹೋಬಳಿ ಮಾದಲಾಪುರದ ಸರ್ವೇ ನಂ.-25ರಲ್ಲಿ 30 ಎಕರೆ ಮತ್ತು ಚಿಕ್ಕನಾಯನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿ ಸೋಮನಹಳ್ಳಿಯ ಸರ್ವೇ ನಂ.-31ರಲ್ಲಿ 47 ಎಕರೆ ಒಟ್ಟು 242.52 ಎಕರೆ ಗೋಮಾಳ ಪ್ರದೇಶವನ್ನು ಸೋಲಾರ್​ ವಿದ್ಯುತ್​ ಘಟಕ ನಿಮಾರ್ಣ ಮಾಡಲು ಇಂಧನ ಇಲಾಖೆಗೆ ನೀಡಿ ಈ ಪ್ರದೇಶದಲ್ಲಿರುವ ಅಪರೂಪದ ಮರಗಳನ್ನು ಕಡಿಯಲು ಟೆಂಡರ್​ ಕರೆದಿರುವುದು ಆತಂಕಕಾರಿ ಎನಿಸಿದೆ ಎಂದು ವನ್ಯಜಿವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಗೋಮಾಳ ಪ್ರದೇಶಗಳು ಮರದ ಹುಲ್ಲುಗಾವಲು, ಕುರುಚಲುಕಾಡು ಹಾಗೂ ಹುಲ್ಲುಗಾವಲಿನಿಂದ ಕೂಡಿದ್ದು, ಕಮರ, ಶ್ರೀಗಂಧ, ಅಳಲೆ, ಜಾಲಾರಿ, ಮರಡಿ, ಹೊನ್ನೆ, ಬಾಗೆ, ಕಾಡುಬಿಕ್ಕೆ, ಕಗ್ಗಲಿ, ದಿಂಡಿಗ, ಉದಯ, ಬಿಲ್ವಾರ, ತೇಗ, ಬೇವು, ಹೊಂಗೆ, ಅಕೇಶಿಯ, ಅರಳಿ, ಆಲ, ಶತಾವರಿ, ಕಾಡುಗೇರು, ತಾರೆ ಇಂತಹ ನೂರಕ್ಕೂ ಹೆಚ್ಚು ಪ್ರಭೇದದ ಔಷಧೀಯ ಮಹತ್ವದ ಮರಗಳು, ನಾನಾ ವಿಧದ ಹುಲ್ಲು ಪ್ರಭೇದಗಳು ಮತ್ತು ಮೂಲಿಕೆಗಳಿವೆ. ಶಿವಸಂದ್ರ ಕಾಡಿನಲ್ಲಿ ಅಳಿವಿನಂಚಿನಲ್ಲಿರುವ ನಾಲ್ಕು ಕೊಂಬಿನ ಆಂಟಿಲೋಪ್​, ಮುಳ್ಳ್​ಂದಿ, ಚಿಪ್ಪಂದಿ, ಕಡವೆ, ಚಿರತೆ, ಕರಡಿ, ಕಾಡುಬೆಕ್ಕು, ನರಿ ಯಂತಹ ಕಾಡುಪ್ರಾಣಿಗಳಿವೆ. ಇಲ್ಲಿನ ಕಾಡು ಪ್ರಾಣಿಪಕ್ಷಿಗಳಿಗೆ ಆಹಾರ, ಆಶ್ರಯವನ್ನು

ನೀಡುತ್ತವೆ ಅಲ್ಲದೆ ನೂರಾರು ಕೀಟಗಳು, ಪತಂಗಳು, ಚಿಟ್ಟೆಗಳ ಆಹಾರ ಸಸ್ಯಗಳಾಗಿವೆ.ಇಂತಹ

ಶ್ರೀಮಂತ ಜೀವವೈವಿಧ್ಯವಿರುವ ಈ ಪ್ರದೇಶ ಗೊಮಾಳವಲ್ಲ ಶ್ರೀಮಂತ ಕಾಡು. ಇಲ್ಲಿನ ಗ್ರಾಮ ಪಂಚಾಯಿತಿ ಪಂಚಾಯತ್​ ರಾಜ್​ ಹಾಗೂ ಜೀವವೈವಿಧ್ಯ ಕಾಯ್ದೆ 2002 ಮತ್ತು 2004 ಕಾಯ್ದೆಯನ್ನು ಉಲ್ಲಂಘಿಸಲಾಗಿದ್ದು, ಈ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳು, ಉಪವಿಭಾಗಧಿಕಾರಿಗಳು, ತಹಸೀಹಲ್ದಾರ್​ ಕ್ಷೇತ್ರ ಭೇಟಿ ನೀಡಿ ಇಲ್ಲಿನ ಜೀವ ವೈವಿಧ್ಯವನ್ನು ಉಳಿಸುವಂತೆ ಪರಿಸರ

ಪ್ರೇಮಿಗಳು ಆಗ್ರಹಿಸಿದ್ದಾರೆ.

ಮರ ಕಡಿಯಲು ಉದ್ದೇಶಿಸಿರುವ ಪ್ರದೇಶದಲ್ಲಿ 1998&-99ರ ಸಾಲಿನಲ್ಲಿ ಜಪಾನ್​ ಸಾಗರೋತ್ತರ ಅಭಿವೃದ್ಧಿ ಹಣದಿಂದ ಪ್ಲಾಂಟೇಷನ್​ ಮಾಡಿದ್ದ, ಕಾಡು ದಟ್ಟವಾಗಿದೆ. ಗಣಿಬಾಧಿತ ಪ್ರದೇಶ ಅಭಿವೃದ್ಧಿ ಪಡಿಸಲು 200 ಕೋಟಿಗಿಂತ ಸಿಎಸ್​ಆರ್​ ನಿಧಿ ಜಿಲ್ಲಾಧಿಕಾರಿಗಳಲ್ಲಿ ಕೊಳೆಯುತ್ತಿದೆ. ಯಾವುದೇ ಶಾಲೆ, ಕಾಲೇಜು, ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಿಲ್ಲ. ಮರ ಕಡಿಸುವುದನ್ನು ನಿಲ್ಲಿಸಿ ಗಣಿಬಾಧಿತ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ಉತ್ಸುಕತೆ ತೋರಬೇಕು. - ಬಿ.ವಿ.ಗುಂಡಪ್ಪ ಅಧ್ಯಕ್ಷ, ನಿಸರ್ಗ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net