ಕಿಡ್ನಿ ಮಾರಾಟಕ್ಕಿಟ್ಟವಳಿಗೆ 3 ಲಕ್ಷ ರೂ. ಧೋಖಾ

Bank Fraud 27 JAN 20
Published on

ಬೆಂಗಳೂರು: ಕುಟುಂಬದ ಕಷ್ಟವನ್ನೆಲ್ಲ ಒಂದೇ ಬಾರಿಗೆ ತೀರಿಸುವ ಉದ್ದೇಶಕ್ಕೆ ತನ್ನ ಕಿಡ್ನಿಯನ್ನೇ ಮಾರಾಟಕ್ಕಿಟ್ಟ 24 ವರ್ಷದ ಯುವತಿಗೆ ಸೈಬರ್ ಖದೀಮರು 3.14 ಲಕ್ಷ ರೂ. ವಂಚಿಸಿದ್ದಾರೆ. ನೊಂದ ಯುವತಿ ನ್ಯಾಯ ಕೋರಿ ಪಶ್ಚಿಮ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಹಾಡಾ ಫಂಗ್ ಎಂಬಾತನ ವಿರುದ್ಧ ಎಫ್​ಐಆರ್ ದಾಖಲಿಸಿ, ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.

ನಗರದಲ್ಲಿ ತಂದೆ-ತಾಯಿ ಜತೆ ನೆಲೆಸಿರುವ ಯುವತಿ, ಖಾಸಗಿ ಬ್ಯಾಂಕ್ ಉದ್ಯೋಗಿ ಆಗಿದ್ದಾರೆ. ಮಧ್ಯಮ ವರ್ಗದ ಕುಟುಂಬವಾದ ಹಿನ್ನೆಲೆ ಆರ್ಥಿಕ ಸಮಸ್ಯೆ ಕಾಡುತ್ತಿತ್ತು. ಈ ನಡುವೆ, ಕಿಡ್ನಿ ದಾನ ಮಾಡಿದರೆ 1 ಕೋಟಿ ರೂ. ಕೊಡುವುದಾಗಿ ಜಾಲತಾಣದಲ್ಲಿ ಜಾಹೀರಾತು ಗಮನಿಸಿ, ಅಲ್ಲಿ ಸಿಕ್ಕ ಮೊಬೈಲ್​ಗೆ ಕರೆ ಮಾಡಿ ವಿಚಾರಿಸಿದ್ದಳು. ಆಮೇಲೆ ಆರೋಪಿಯೇ ಯುವತಿಗೆ ಕರೆ ಮಾಡಿ ‘ನೀವು ಕಿಡ್ನಿ ಕೊಡಬೇಕಾದರೆ ಮೊದಲು ಕೆಲ ಶುಲ್ಕ ಪಾವತಿಸಬೇಕು. ಪೊಲೀಸ್ ಪ್ರಮಾಣ ಪತ್ರ, ತೆರಿಗೆ, ಮತ್ತು ವಿಮೆ ಮಾಡಿಸಿಕೊಳ್ಳಬೇಕು’ ಎಂದಿದ್ದ. ನಂಬಿದ ಯುವತಿ, ಆರೋಪಿ ನೀಡಿದ ಖಾಸಗಿ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಹಣ ಜಮೆ ಮಾಡಿದ್ದಾರೆ.

ಲಾಕ್​ಡೌನ್​ನಲ್ಲಿ ಕೆಲಸ ಇಲ್ಲದೆ ಖಾಲಿ ಕೈಯಲ್ಲಿದ್ದ ಯುವತಿ, ಮನೆಯಲ್ಲಿದ್ದ ಚಿನ್ನಾಭರಣ ಮಾರಿ ಹಣ ಕೊಟ್ಟಿದ್ದಳು. ಮತ್ತೆ ಮತ್ತೆ ಹಣ ಕೇಳಿದಾಗ ಅನುಮಾನ ಬಂದು ಪ್ರಶ್ನಿಸಿದಾಗ, ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net