

ನೆಲಮಂಗಲ: ತಾಲೂಕಿನ ರಾ.ಹೆದ್ದಾರಿ 75ರ ಕುಲುವನಹಳ್ಳಿ ಸಮೀಪ ಕ್ಯಾಂಟರ್ ಲಾರಿ ಹಾಗೂ ಕಾಂಕ್ರೀಟ್ ಕೆಲಸ ಮಾಡುವವ ಸಹಾಯಕರನ್ನು ಒಯ್ಯುತ್ತಿದ್ದ ಟೆಂಪೊ ನಡುವೆ ಸಂಭವಿಸಿದ ಅಪಘಾತದಲ್ಲಿ ಪಾದಚಾರಿ ಸೇರಿ 3 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ತುಮಕೂರು ತಾಲೂಕಿನ ಕಾಳೆನಹಳ್ಳಿ ನಿವಾಸಿ ಶಿವಗಂಗಪ್ಪ(55) ಮೃತ ಪಾದಚಾರಿ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕು ಸೀತಗುಂಟ ನಿವಾಸಿಗಾಳದ ಹುಸೇನಪ್ಪ(34), ನರಸಪ್ಪ(35) ಮೃತರು. ಸಾಬಣ್ಣ(40) ಬಂಗಾರಪ್ಪ(41), ಕಟ್ಟಪ್ಪ(38)ಲಕ್ಷಿ$್ಮ(30), ಅನುಮಂತಿ(27), ಶಾಂತಾ(38) ಗಾಯಾಳುಗಳು.
ಕುಲುವನಹಳ್ಳಿ ಸಮೀಪ ಭಾನುವಾರ ಸಂಜೆ ಸುಮಾರು 5 ಗಂಟೆಗೆ ತ್ಯಾಮಗೊಂಡ್ಲು ಕಡೆಯಿಂದ ಬಂದ ಕಾಂಕ್ರೀಟ್ ಗ್ಯಾಂಗ್ ವಾಹನ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ತುಮಕೂರು ಕಡೆಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾಂಕ್ರೀಟ್ ಗ್ಯಾಂಗ್ ವಾಹನದ ಹಿಂಬದಿ ಕುಳಿತಿದ್ದ ಹುಸೇನಪ್ಪ ಹಾಗೂ ನರಸಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆಗೆ ರಸ್ತೆ ದಾಟಲು ವಿಭಜಕದ ಮಧ್ಯೆ ನಿಂತಿದ್ದ ಪಾದಚಾರಿ ಶಿವಗಂಗಪ್ಪಗೆ ಕಂಬಿ ತಗುಲಿ ಅವರೂ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಟೆಂಪೊದಲ್ಲಿದ್ದ ಸಾಬಣ್ಣ, ಬಂಗಾರಪ್ಪ, ಕಟ್ಟಪ್ಪ, ಲ್ಮ, ಹನುಮಂತಿ, ಶಾಂತಾ ಅವರಿಗೆ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ಮೃತ ಶಿವಗಂಗಪ್ಪ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಕಾಳೇನಹಳ್ಳಿ ನಿವಾಸಿಯಾಗಿದ್ದು, ಕೆಲವರ್ಷಗಳ ಕಾಲ ತಾಲೂಕಿನ ದೊಡ್ಡೇರಿ ಗ್ರಾಮದ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಪುತ್ರಿ ಜತೆ ವಾಸವಾಗಿದ್ದರು. ಆದರೆ, ಇತ್ತೀಚೆಗೆ ಅನಾರೋಗ್ಯದ ನಿಮಿತ್ತ ಕಾಳೇನಹಳ್ಳಿಗೆ ಹೋಗಿ ನೆಲೆಸಿದ್ದು, ಕುಲುವನಹಳ್ಳಿಯ ಪಡಿತರ ಅಂಗಡಿಯಲ್ಲಿ ಪಡಿತರ ಕೊಂಡೊಯ್ಯಲು ಬಂದಿದ್ದರು ಎನ್ನಲಾಗಿದೆ. ಶಿವಗಂಗಪ್ಪ ಅವರನ್ನು ಕಳೆದುಕೊಂಡ ಪತ್ನಿ ಹಾಗೂ ಪುತ್ರಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಟ್ರಾಫಿಕ್ ಜಾಮ್: ಭೀಕರ ರಸ್ತೆ ಅಪಘಾತ ಸಂಭವಿಸಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು&ತುಮಕೂರು ರಸ್ತೆ ಸುಮಾರು 4&5 ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ್ದ ನಗರ ಸಂಚಾರಿ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ರವಿ, ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಶಶಿಧರ್ ನೇತೃತ್ವದ ಪೊಲೀಸ್ ಸಿಬ್ಬಂದಿ ಹರಸಾಹಸ ಮಾಡಿ ಟ್ರಾಫಿಕ್ ನಿಯಂತ್ರಣ ಮಾಡಿದರು.