3 ಗಂಟೆಯಲ್ಲಿ ಮುಗಿದ ಬರ ಅಧ್ಯಯನ!

6Manju4-web
ನೇಸರಗಿ ಗ್ರಾಮದಲ್ಲಿ ಕೇಂದ್ರ ಬರ ಅಧ್ಯಯನ ತಂಡವು ಕ್ಯಾರೆಟ್ ಬೆಳೆ ಪರಿಶೀಲಿಸಿತು. ಅಜಿತಕುಮಾರ್ ಸಾಹು, ಡಾ.ಕೆ.ಪೊನ್ನುಸ್ವಾಮಿ, ಮಹೇಂದ್ರ ಚಂಡೇಲಿಯಾ, ಶಿವಚರಣ ಮೀನಾ, ವೈ.ಎಸ್.ಪಾಟೀಲ, ನಿತೇಶ ಪಾಟೀಲ, ಡಾ.ರಾಜೀವ್ ಕೂಲೇರ್, ಡಾ.ಎಂ.ವಿ.ಪಾಟೀಲ, ಡಾ.ಅನಿಲ ಮರಲಿಂಗನವರ ಇದ್ದರು.
Published on

ಬೆಳಗಾವಿ: ಪ್ರಸಕ್ತ ಮುಂಗಾರಿನಲ್ಲಿ ತೀವ್ರ ಬರ ಎದುರಿಸುತ್ತಿರುವ ಬೆಳಗಾವಿ ಜಿಲ್ಲೆಗೆ ಶುಕ್ರವಾರ ಆಗಮಿಸಿದ್ದ ಕೇಂದ್ರ ತಂಡ ಕೇವಲ ಮೂರು ಗಂಟೆಯಲ್ಲಿ ಬರ ಅಧ್ಯಯನ ಮುಕ್ತಾಯಗೊಳಿಸುವ ಮೂಲಕ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಅಥಣಿ, ಚಿಕ್ಕೋಡಿ, ಕಾಗವಾಡ, ರಾಯಬಾಗ, ಹುಕ್ಕೇರಿ, ಗೋಕಾಕ, ಮೂಡಲಗಿ, ಬೈಲಹೊಂಗಲ, ರಾಮದುರ್ಗ, ಕಿತ್ತೂರು, ಸವದತ್ತಿ ಸೇರಿ ವಿವಿಧ ತಾಲೂಕಿನಲ್ಲಿ ನೀರಾವರಿ, ಮಳೆಯಾಶ್ರಿತ ಪ್ರದೇಶದಲ್ಲಿ ಹಸಿರು ಮತ್ತು ಒಣ ಬರದಿಂದಾಗಿ ಒಟ್ಟು 2.78 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದ್ದು, 2,928 ಕೋಟಿ ರೂ. ಬೆಳ ನಷ್ಟ ಉಂಟಾಗಿದೆ. ಆದರೆ, ಕೇಂದ್ರ ಬರ ಅಧ್ಯಯನ ತಂಡವು ಮೂರು ತಾಲೂಕು ವ್ಯಾಪ್ತಿಯ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಜಮೀನುಗಳಲ್ಲಿ ಪರಿಶೀಲನೆ ನಡೆಸಿ ಹೊರಟುಹೋಗಿದೆ.

ಕೇಂದ್ರ ಕಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತಕುಮಾರ್ ಸಾಹು ನೇತೃತ್ವದ ಐದು ಜನರ ತಂಡವು ಬೆಳಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿತು. ಬಳಿಕ ಬೈಲಹೊಂಗಲ ತಾಲೂಕಿನ ನೇಸರಗಿ ಬಳಿ ನಾಗಪ್ಪ ಹಬಿ ಅವರ ಜಮೀನಿನಲ್ಲಿ ಸೋಯಾಬೀನ್ ಹಾಗೂ ರಾಜು ಹೊಂಗಲ್ ಹಾಗೂ ಬಸಪ್ಪ ಕುಂಟಿಗೇರಿ ಅವರ ಜಮೀನಿನಲ್ಲಿ ಕ್ಯಾರೆಟ್ ಬೆಳೆಹಾನಿ ವೀಕ್ಷಿಸಿದರು. ನಂತರ ಚಚಡಿಯಲ್ಲಿ ವೀರಭದ್ರಪ್ಪ ಹೊಸಮನಿ ಅವರ ಒಂದೂವರೆ ಎಕರೆ ಸೂರ್ಯಕಾಂತಿ ವೀಕ್ಷಿಸಿದರು. ಹೀಗೆ ಸವದತ್ತಿ ತಾಲೂಕಿನ ಹಲಕಿ, ಯರಗಟ್ಟಿ ತಾಲೂಕಿನ ಬೂದಿಗೊಪ್ಪ, ಯರಗಣವಿ, ರಾಮದುರ್ಗ ತಾಲೂಕಿನ ಕೆ.ಚಂದರಗಿ, ಬೂದನೂರ, ಸಾಲಹಳ್ಳಿ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿದ ತಂಡವು ವಿಜಯಪುರ ಜಿಲ್ಲೆಗೆ ಪ್ರವಾಸಿ ಬೆಳೆಸಿತು.
ಜಿಪಂ ಸಿಇಒ ಹರ್ಷಲ್ ಭೋಯರ್, ಎಸ್‌ಪಿ ಡಾ.ಭೀಮಾಶಂಕರ್ ಗುಳೇದ, ಕೃಷಿ ಇಲಾಖೆ ಹಿರಿಯ ಅಧಿಕಾರಿ ಡಾ.ವಿ.ಜೆ.ಪಾಟೀಲ, ಅಪರ ಜಿಲಾಧ್ಲಿಕಾರಿ ವಿಜಯಕುಮಾರ ಹೊನಕೇರಿ, ಉಪ ವಿಭಾಗಾಧಿಕಾರಿ ಶ್ರವಣ್ ನಾಯಕ, ಶಿವನಗೌಡ ಪಾಟೀಲ, ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೇಕರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ್ ಕೂಲೇರ್ ಇತರರಿದ್ದರು.

ಎನ್‌ಡಿಆರ್‌ಎ್ ಪ್ರಕಾರ 332 ಕೋಟಿ ರೂ. ನಷ್ಟ: ಲ್ಲೆಯಲ್ಲಿ ಮಳೆ ಕೊರತೆಯಿಂದ ಸೋಯಾಬೀನ್, ಹತ್ತಿ, ಸೂರ್ಯಕಾಂತಿ, ಕ್ಯಾರೆಟ್, ಗೋವಿನಜೋಳ, ಕಬ್ಬು, ಟೊಮ್ಯಾಟೋ, ಬಟಾಣಿ ಸೇರಿ ವಿವಿಧ ಬಗೆ ಬೆಳೆಗಳು ಸೇರಿ ಒಟ್ಟು 2.78 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ. ವಾಸ್ತವದಲ್ಲಿ ಕಷಿ ಹಾಗೂ ತೋಟಗಾರಿಕೆ ಸೇರಿ ಒಟ್ಟಾರೆ 2,928 ಕೋಟಿ ರೂಪಾಯಿ ಬೆಳೆಹಾನಿಯಾಗಿದೆ. ಆದರೆ ಎನ್.ಡಿ.ಆರ್.ಎ್. ಮಾರ್ಗಸೂಚಿ ಪ್ರಕಾರ 332 ಕೋಟಿ ರೂ.ಆಗಲಿದೆ ಎಂದು ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮನವರಿಕೆ ಮಾಡಿಕೊಟ್ಟರು.

ಚಿಕಿತ್ಸಾ ಶಿಬಿರಕ್ಕೆ ಭೇಟಿ ನೀಡಿದ ಅಧಿಕಾರಿಗಳು

ಯರಗಟ್ಟಿ ತಾಲೂಕಿನ ಯರಗಣವಿ ಗ್ರಾಮದಲ್ಲಿ ಆಯೋಜಿಸಿರುವ ಜಾನುವಾರು ಆರೋಗ್ಯ ಚಿಕಿತ್ಸಾ ಶಿಬಿರಕ್ಕೆ ಭೇಟಿ ನೀಡಿದ ಬರ ಅಧ್ಯಯನ ತಂಡವು, ಗ್ರಾಮದ ಜನಪ್ರತಿನಿಧಿಗಳು ಹಾಗೂ ರೈತರ ಜತೆ ಸ್ಥಳಿಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ರಾಜೀವ್ ಕೂಲೇರ್, ಡಾ.ಎಂ.ವಿ.ಪಾಟೀಲ, ಡಾ.ಅನಿಲ ಮರಲಿಂಗನವರ ಇತರರಿದ್ದರು.

ಅಜಿತಕುಮಾರ್ ಸಾಹು ನೇತೃತ್ವ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತಕುಮಾರ್ ಸಾಹು ನೇತೃತ್ವದ ತಂಡದಲ್ಲಿ ಎಣ್ಣೆಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಕೆ.ಪೊನ್ನುಸ್ವಾಮಿ, ಕೇಂದ್ರ ಆರ್ಥಿಕ ವೆಚ್ಚ ಇಲಾಖೆಯ ಸಹಾಯಕ ನಿರ್ದೇಶಕ ಮಹೇಂದ್ರ ಚಂಡೇಲಿಯಾ, ನೀತಿ ಆಯೋಗದ ಸಂಶೋಧನಾ ಅಧಿಕಾರಿ ಶಿವಚರಣ ಮೀನಾ ಹಾಗೂ ರಾಜ್ಯ ಕಷಿ ಇಲಾಖೆಯ ಆಯುಕ್ತ ವೈ.ಎಸ್.ಪಾಟೀಲ ಇದ್ದರು.

ಎರಡು ಎಕರೆಗೆ 1 ಲಕ್ಷ ರೂ. ಖರ್ಚು

ಮುಂಗಾರು ಹಂಗಾಮಿನ ಆರಂಭದಲ್ಲಿ ಮಳೆ ಸುರಿದಿದ್ದರಿಂದ ಬಿತ್ತನೆಗಾಗಿ ಎರಡು ಎಕರೆ ಭೂಮಿಗೆ 1ಲಕ್ಷ ರೂ.ಗೂ ಅಧಿಕ ಖರ್ಚು ಮಾಡಲಾಗಿದೆ. ಬೀಜ, ಗೊಬ್ಬರಕ್ಕಾಗಿ 25 ಸಾವಿರ ರೂ. ಖರ್ಚು ಮಾಡಲಾಗಿದೆ. ಆದರೆ, ಒಂದೇ ಒಂದು ರೂಪಾಯಿ ಆದಾಯ ಬಂದಿಲ್ಲ. ಭೂಮಿಯಲ್ಲಿ ಬೆಳೆಗಳು ಹಸಿರಾಗಿ ಬೆಳೆದು ನಿಂತಿವೆ. ಆದರೆ, ಯಾವ ಬೆಳೆಯೂ ಕಾಯಿ ಕಟ್ಟಿಲ್ಲ ಎಂದು ಕೇಂದ್ರ ಬರ ಅಧ್ಯಯನ ತಂಡದ ಎದುರು ರೈತರಾದ ಬಸಪ್ಪ ಕುಂಟಿಗೇರಿ, ಮೀರಪ್ಪ ಹುಕ್ಕೇರಿ, ಕಮಲವ್ವ ನಡಹಟ್ಟಿ , ವೀರಭದ್ರಪ್ಪ ಹೊಸಮನಿ ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net