

ಎಚ್.ಡಿ.ಕೋಟೆ: ತಾಲೂಕಿನಾದ್ಯಂತ ಹಾಗೂ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾರಕ ಜಲಾಶಯ ಭರ್ತಿ ಆಗಲು ಮೂರು ಅಡಿ ಬಾಕಿ ಇದೆ.
ತಾಲೂಕಿನ ರೈತರ ಜೀವನದಿಯಾದ ತಾರಕ ಜಲಾಶಯವು 2425 ಅಡಿ ಇದ್ದು, 3.95 ಟಿಎಂಸಿ ನೀರಿನ ಸಂಗ್ರಹ ಹೊಂದಿದೆ. ಇದಕ್ಕೆ ಸುಮಾರು 18 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶವಿದೆ. 2422 ಅಡಿ ತಲುಪಿದ್ದು, ಜಲಾಶಯಕ್ಕೆ 3200 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ 1000 ಕ್ಯೂಸೆಕ್ ನೀರನ್ನು ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ಹರಿಯಬಿಡಲಾಗುತ್ತಿದೆ. ತಾಲೂಕಿನ ಕಬಿನಿ, ನುಗು ಜಲಾಶಯಗಳು ಹದಿನೈದು ದಿನಗಳ ಹಿಂದೆಯೆ ಭರ್ತಿಯಾಗಿದ್ದರೆ, ತಾರಕ ಜಲಾಶಯ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಿಂದ ಜಲಾಶಯ ತುಂಬಿರಲಿಲ್ಲ. ಇದರಿಂದ ರೈತರು ಆತಂಕದಲ್ಲಿದ್ದರು. ಕಳೆದ ಮೂರು ದಿನಗಳಿಂದ ತಾಲೂಕು ಸೇರಿದಂತೆ ನಾಗರಹೊಳೆ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದ ಜಲಾಶಯ ಭರ್ತಿ ಹಂತ ತಲುಪಿದೆ.
ತಾರಕ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಬಿಡುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶದಲ್ಲಿ ವಾಸ ಮಾಡುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮೇಗೌಡ ತಿಳಿಸಿದ್ದಾರೆ.