

ಮೈಸೂರು: ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿದ್ದು, ಇದೀಗ ಜಲಾಶಯ ಸಂಪೂರ್ಣ ಭರ್ತಿಯಾಗಲು 3 ಅಡಿ ಮಾತ್ರ ಬಾಕಿ ಇದೆ.
ಕೇರಳದ ವಯನಾಡು ಪ್ರಾಂತ್ಯದಲ್ಲಿ ಮುಂಗಾರು ಚುರುಕುಗೊಂಡ ಪರಿಣಾಮ ಗುರುವಾರ ಬೆಳಗ್ಗೆ 2280.35 ಅಡಿ ಇದ್ದ ನೀರಿನ ಮಟ್ಟ ಸಂಜೆ ವೇಳೆಗೆ 2,281ಅಡಿಗೆ ಏರಿಕೆ ಕಂಡಿದೆ. ಜಲಾಶಯದ ಒಳಹರಿವಿನ ಪ್ರಮಾಣ 6,874 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಸದ್ಯ 1,333 ಕ್ಯೂಸೆಕ್ ಹೊರಹರಿವು ಇದೆ.
2,284 ಅಡಿ ಸಾಮರ್ಥ್ಯದ ಕಬಿನಿ ಜಲಾಶಯ ಯಾವಾಗಲೂ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಭರ್ತಿಯಾಗುತ್ತದೆ. ಹೆಚ್ಚು ಸಮಯ ಜೂನ್ ಕಡೆಯ ವಾರದಲ್ಲಿ ಭರ್ತಿಯಾಗಿ ಜುಲೈ ಆರಂಭದಲ್ಲಿ ಬಾಗಿನ ಸ್ವೀಕರಿಸಿದೆ. ಕಳೆದ ವರ್ಷ ಕೇರಳದ ವಯನಾಡು ಪ್ರಾಂತ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಆಗದೆ ನಿಗದಿತ ಸಮಯದಲ್ಲಿ ಡ್ಯಾಂ ಭರ್ತಿಯಾಗಲಿಲ್ಲ. ಆದರೂ ಆಗಸ್ಟ್ ವೇಳೆಗೆ ಭರ್ತಿಯಾಗಿ ತಮಿಳುನಾಡಿಗೂ ನೀರು ಹರಿಸಲಾಗಿತ್ತು.
ಈ ಬಾರಿ ವಯನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಶೀಘ್ರದಲ್ಲೇ ಜಲಾಶಯ ಭರ್ತಿಯಾಗುವ ಆಶಾಭಾವ ಮೂಡಿದೆ. 19.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 17.25 ಟಿಎಂಸಿ ನೀರು ಸಂಗ್ರಹವಾಗಿದೆ.