

ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2021ಕ್ಕೆ ಈ ಸಲ ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಆಗಮಿಸುವ ಸಾಧ್ಯತೆ ಇದೆ. ಅರ್ಥಾತ್, ದಸರೆ ಜಂಬೂಸವಾರಿಗೆ ಪ್ರಾಥಮಿಕ ಹಂತದಲ್ಲಿ ಮೂರು ಆನೆಗಳನ್ನು ಇಂದು ಗುರುತಿಸಲಾಗಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಂದು ಈ ಆಯ್ಕೆ ನಡೆದಿದೆ. ಇಲ್ಲಿನ ರಾಂಪುರ ಆನೆ ಶಿಬಿರಕ್ಕೆ ಮೈಸೂರು ಡಿಸಿಎಫ್ ಕಾರಿಕಾಳನ್ ಭೇಟಿ ನೀಡಿ, ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಎಂಬ 2 ಹೆಣ್ಣು, 1 ಗಂಡು ಆನೆಗಳನ್ನು ಪ್ರಾಥಮಿಕ ಹಂತದಲ್ಲಿ ಆಯ್ಕೆ ಮಾಡಿದ್ದಾರೆ.
ಸೆಪ್ಟೆಂಬರ್ 3ರಂದು ನಡೆಯಲಿರುವ ದಸರಾ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಈ ಆಯ್ಕೆ ಕುರಿತು ಚರ್ಚೆ ಆಗಲಿದ್ದು, ಅಲ್ಲಿ ಅಂತಿಮವಾಗಿ ಆಯ್ಕೆಗೊಳ್ಳುವ ಆನೆಗಳು ದಸರಾ ಮಹೋತ್ಸವದಲ್ಲಿ ಭಾಗಿ ಆಗಲಿವೆ.