3 ಜಿಲ್ಲೆಗಳ ಅಧಿಕಾರಿಗಳಿಂದ ಕಾರ್ಯಾಚರಣೆ

20 HDLP 03
ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ಸಮೀಪ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಕಬ್ಬಿಣದ ತೆಪ್ಪವನ್ನು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಬುಧವಾರ ವಶ ಪಡಿಸಿಕೊಂಡು ತೆಪ್ಪವನ್ನು ಜೆಸಿಪಿಯಿಂದ ನುಜ್ಜು ಗುಜ್ಜು ಮಾಡಿದರು.
Published on

ಹೂವಿನಹಡಗಲಿ: ತಾಲೂಕಿನ ನದಿ ತೀರದ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆನ್ನು ತಡೆಯಲು ಬಳ್ಳಾರಿ, ವಿಜಯನಗರ ಮತ್ತು ಹಾವೇರಿ ಜಿಲ್ಲೆಗಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತುಂಗಭದ್ರಾ ನದಿಯ ಎಡ ಮತ್ತು ಬಲ ದಂಡೆ ಭಾಗದ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದವರ ಮೇಲೆ ದಾಳಿ ಮಾಡಿ ತೆಪ್ಪ ಹಾಗೂ ಮರಳು ತುಂಬಿದ್ದ ಟಿಪ್ಪರನ್ನು ಬುಧವಾರ ವಶಪಡಿಸಿಕೊಂಡಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನದಿ ತೀರದಲ್ಲಿ ಬೀಡು ಬಿಟ್ಟು ಮಂಗಳವಾರ ಮತ್ತು ಬುಧವಾರ ನಿರಂತವಾಗಿ ಕಾರ್ಯಾಚರಣೆ ನಡೆಸಿದರು. ಕುರುವತ್ತಿ ಗ್ರಾಮದ ಸಮೀಪ ಮೂರು ತೆಪ್ಪ ಹಾಗೂ ಒಂದು ಮರಳು ತುಂಬಿದ ಒಂದು ಟಿಪ್ಪರ್ ವಶಕ್ಕೆ ಪಡೆದಿದ್ದಾರೆ. ಹಾವೇರಿ ಜಿಲ್ಲೆಯ ಮೇವುಂಡಿ, ತೆರೆದಹಳ್ಳಿ ಗ್ರಾಮಗಳ ಸಮೀಪದಲ್ಲಿ 5 ಕಬ್ಬಿಣದ ತೆಪ್ಪಗಳನ್ನು ವಶಕ್ಕೆ ಪಡೆದಿದ್ದಾರೆ.

ಅಧಿಕಾರಿಗಳು ದಾಳಿ ಮಾಡುತ್ತಿದಂತೆ ಮರಳು ದಂಧೆಕೋರರು ನದಿಯಲ್ಲಿ ಕಬ್ಬಿಣದ ತೆಪ್ಪಗಳನ್ನು ಮುಳುಗಿಸಿ ನದಿಯಲ್ಲಿ ಈಜಿ ಪರಾರಿಯಾಗಿದ್ದಾರೆ. ಸಿಬ್ಬಂದಿಗಳಿಗೆ ಜೀವರಕ್ಷಕ ಪರಿಕರಗಳನ್ನು ಒದಗಿಸಿ ನಿರಂತರವಾಗಿ ಕಾರ್ಯಚರಣೆ ನಡೆಸಲು ಬೋಟ್ ವ್ಯವಸ್ಥೆ ಮಾಡುವ ಮೂಲಕ ಅಕ್ರಮಕ್ಕೆ ತಡೆ ಹಾಕಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಕಿರಣ್ ಬುಧವಾರ ವಿಜಯವಾಣಿಗೆ ತಿಳಿಸಿದರು. ಬುಧವಾರ ಸಂಜೆವರೆಗೂ ಕಾರ್ಯಾಚರಣೆಯನ್ನು ಮುಂದುವರೆಸಿದ್ದರು. ತೆಪ್ಪಗಳನ್ನು ಜೆಸಿಬಿ ಸಹಾಯದಿಂದ ವಿಕಾರಗೊಳಿಸಲಾಯಿತು.

ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಸಂತೋಷ ಕುಮಾರ, ಮೂರು ಜಿಲ್ಲೆಗಳ ಭೂ ವಿಜ್ಞಾನಿಗಳಾದ ಮಲ್ಲಯ್ಯ, ಶಭೀರ, ಕುಮಾರ ನಾಯ್ಕ ಇತರರಿದ್ದರು.

ತಾಲೂಕಿನ ನದಿ ತೀರದ ಪ್ರದೇಶಗಳಾದ ಕುರುಚತ್ತಿ, ಮೈಲಾರ, ಬ್ಯಾಲಹುಣ್ಸಿ ಭಾಗಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಕುರಿತು ವಿಜಯವಾಣಿಯಲ್ಲಿ ಮಂಗಳವಾರ ‘ಹಗಲಲ್ಲೇ ಮರಳು ಅಕ್ರಮ ಸಾಗಣೆ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net