

ಉಡುಪಿ: ಜಿಲ್ಲೆಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದ ಉಡುಪಿ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದಾರೆ. ಉಡುಪಿಯಲ್ಲಿ ಒಬ್ಬರು, ಕುಂದಾಪುರದ ಒಬ್ಬರು ಮೃತ ವ್ಯಕ್ತಿಗಳು.
ಡಾ.ಟಿ.ಎಂ.ಎ. ಪೈ ಕೋವಿಡ್ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಉಡುಪಿ ತಾಲೂಕಿನ 49 ವರ್ಷದ ವ್ಯಕ್ತಿ ಮೃತಪಟ್ಟಿದ್ದರು. ಅಧಿಕ ಸಕ್ಕರೆ ಪ್ರಮಾಣದಿಂದ ಅವರು ಅಸ್ವಸ್ಥರಾಗಿದ್ದರು. ಅವರಿಗೆ ಕರೊನಾ ಸೋಂಕು ಪಾಸಿಟಿವ್ ಆಗಿತ್ತು.
ಆರಂಭದಲ್ಲಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದರು. ಬುಧವಾರ ರಾತ್ರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ರಾತ್ರಿ ತೀವ್ರ ಅಸ್ತಮಾದಿಂದ ಬಳಲುತ್ತಿದ್ದ ಕುಂದಾಪುರದ 58 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಅವರಿಗೂ ಕರೊನಾ ಪಾಸಿಟಿವ್ ದೃಢವಾಗಿದ್ದು, ಚಿಕಿತ್ಸೆ ಆರಂಭಿಸುವ ಮೊದಲೇ ಮೃತಪಟ್ಟಿದ್ದಾರೆ.
ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಾದ್ದ ಅಂಕೋಲದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಅವರು ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.