

ಕೆಜಿಎಫ್: ನ್ಯಾಯಾಲಯಗಳಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ದಾವೆಗಳ ತ್ವರಿತ ವಿಲೇವಾರಿಗಾಗಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಲೋಕ ಅದಾಲತ್ನಲ್ಲಿ ಬಾಕಿಯಿರುವ 7,176 ಪ್ರಕರಣಗಳ ಪೈಕಿ 3,518 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 3,444 ಪ್ರಕರಣಗಳು ಇತ್ಯರ್ಥಗೊಂಡು, ಒಟ್ಟು 2.95 ಕೋಟಿ ರೂ. ಸಂಗ್ರಹವಾಗಿದೆ.
ನಗರದ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಅದಾಲತ್ನಲ್ಲಿ ರಾಜಿ ಮಾಡಿಕೊಳ್ಳಬಹುದಾದ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಬಾಕಿ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಾರ್ವಜನಿಕರು ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ಕಾರಣಾಂತರಗಳಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ಮೂರು ಜೋಡಿಗಳ ಮನವೊಲಿಸಿ ಮತ್ತೆ ಒಂದಾಗಿಸುವಲ್ಲಿ ನ್ಯಾಯಾಧೀಶರು ಯಶಸ್ವಿಯಾಗಿದ್ದಾರೆ. 2024ರ ಸೆಪ್ಟಂಬರ್ನಲ್ಲಿ ವರ್ಷಿಣಿ ಮತ್ತು ಗಜೇಂದ್ರ, ಅಕ್ಟೋಬರ್ನಲ್ಲಿ ಬಿ.ಕೆ.ಮಣಿ ಮತ್ತು ಸುಗುಣಮ್ಮ, ನವೆಂಬರ್ನಲ್ಲಿ ಮೋನಿಶಾ ಮತ್ತು ಅಪ್ಸರ್ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಧೀಶರಾದ ವಿನೋದ್ಕುಮಾರ್ ಮತ್ತು ನದಾಫ್ ಅವರು ಅರ್ಜಿದಾರರ ಮನವೊಲಿಸಿ, ರಾಜಿ ಸಂಧಾನ ಸೂತ್ರ ಅನುಸರಿಸುವ ಮೂಲಕ ಮತ್ತೆ ಒಂದು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಪ್ರಕರಣ, ಹಣಕಾಸು ಸಂಸ್ಥೆಗಳಿಗೆ ಸಂಬಂದಿಸಿದ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವೈವಾಹಿಕ/ಕೌಟುಂಬಿಕ ಪ್ರಕರಣ(ವಿಚ್ಛೇದನ ಹೊರತುಪಡಿಸಿ), ಚೆಕ್ಬೌನ್ಸ್ ಪ್ರಕರಣಗಳು, ಆಸ್ತಿಯಲ್ಲಿ ಪಾಲು ವಿಭಾಗ, ದೂರವಾಣಿ ಬಾಕಿ ಬಿಲ್ಲುಗಳ ಪಾವತಿ ಪ್ರಕರಣಗಳು, ಕಳೆದ ತಿಂಗಳಿನಿಂದ ಪ್ರಚಾರ ಮತ್ತು ಅರಿವು ಮೂಡಿಸಿದ್ದರಿಂದ ಇಷ್ಟೂ ಪ್ರಕರಣಗಳು ಇತ್ಯರ್ಥವಾಗಲು ಸಾಧ್ಯವಾಯಿತು ಎನ್ನಲಾಗಿದೆ.
ಕಳೆದೊಂದು ತಿಂಗಳಿನಿಂದ ಕೆಎಸ್ಆರ್ಟಿಸಿ ಸಂಸ್ಥೆಯವರು ಪ್ರತಿನಿತ್ಯ ವಿತರಿಸುವ ಟಿಕೆಟ್ಗಳ ಹಿಂಭಾಗದಲ್ಲಿ ಮತ್ತು ಬಸ್ಗಳ ಹಿಂಬದಿ ಇಲ್ಲವೇ ಎಡ ಮತ್ತು ಬಲ ಭಾಗಗಳಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸುವ ಮೂಲಕ ಸಾರ್ವಜನಿಕರಲ್ಲಿ ಲೋಕ ಅದಾಲತ್ ಬಗ್ಗೆ ಅರಿವು ಮೂಡಿಸಿದ್ದರು.
ನಗರಸಭೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿನಿತ್ಯ ಬೆಳಗ್ಗೆ ಕಸ ಸಂಗ್ರಹಣೆಗೆಂದು ಹೋಗುವ ಸ್ವಚ್ಛ ವಾಹಿನಿಗಳ ಮೂಲಕ ಪ್ರಚಾರ ಕೈಗೊಳ್ಳಲಾಗಿತ್ತು. ಅಲ್ಲದೇ ಬೆಸ್ಕಾಂ ಮತ್ತು ಬಿಎಸ್ಎನ್ಎಲ್ ಇಲಾಖೆಗೆ ಬಾಕಿ ಕಟ್ಟಬೇಕಾಗಿರುವ ಗ್ರಾಹಕರಿಗೆ ನೀಡುವ ಬಿಲ್ಗಳ ಹಿಂಬದಿಯಲ್ಲಿಯೂ ಲೋಕ ಅದಾಲತ್ ನಡೆಯುವ ಬಗ್ಗೆ ಪ್ರಚಾರ ಕಾರ್ಯ ಕೈಗೊಳ್ಳಲಾಗಿತ್ತು.
ಅಪರ ಹಿರಿಯ ಶ್ರೇಣಿ ನ್ಯಾಯಾಧೀಶ ರಹೀಂ ಅಲಿ ಮೌಲಾಸಾಬ್ ನದಾಫ್, ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ಆರ್.ಮಂಜುನಾಥ, 1ನೇ ಅಪರ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ವಿನೋದ್ಕುಮಾರ್, ನ್ಯಾಯಾಧೀಶೆ ಶಮಿದ ಇದ್ದರು.