

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿನ ಹುಂಡಿಗಳಿಗೆ ಕಳೆದ 35 ದಿನಗಳಲ್ಲಿ 3.73 ಕೋಟಿ ರೂ. ದೇಣಿಗೆ ಬಂದಿದ್ದು, ಇದು ಪ್ರತಿ ತಿಂಗಳು ನಡೆಯುತ್ತಿರುವ ಕಾಣಿಕೆ ಎಣಿಕೆಯಲ್ಲಿ ಅತಿ ಹೆಚ್ಚಿನ ಎರಡನೇ ಕಾಣಿಕೆಯಾಗಿದೆ.
ಶ್ರೀಮಠದಲ್ಲಿ ಮಂಗಳವಾರ ಬೆಳಗ್ಗೆಯಿಂದ ಕಾಣಿಕೆ ಎಣಿಕೆ ಕಾರ್ಯ ಆರಂಭಿಸಲಾಗಿದ್ದು, 3.62 ಕೋಟಿ ರೂ. ವೌಲ್ಯದ ನೋಟುಗಳು ಹಾಗೂ 10.82 ಲಕ್ಷ ರೂ. ನಾಣ್ಯಗಳು ಹಾಗೂ 60 ಗ್ರಾಂ ಚಿನ್ನಾಭರಣ, 300 ಗ್ರಾಂ ಬೆಳ್ಳಿ ಆಭರಣಗಳು ಕಾಣಿಕೆಯಾಗಿ ಬಂದಿವೆ.
ಕಳೆದ ತಿಂಗಳು ಹುಂಡಿ ಎಣಿಕೆ ಸಂದರ್ಭದಲ್ಲಿ ಅತಿ ಹೆಚ್ಚಿನ 3.82 ಕೋಟಿ ರೂ. ಹಾಗೂ 53 ಗ್ರಾಂ ಬಂಗಾರ, 1,200 ಗ್ರಾಂ ಬೆಳ್ಳಿ ಕಾಣಿಕೆಯಾಗಿ ಬಂದಿದ್ದು ಅತಿ ಹೆಚ್ಚಿನ ಕಾಣಿಕೆಯಾಗಿತ್ತು. ಪ್ರಸಕ್ತ ತಿಂಗಳ ಹುಂಡಿ ಎಣಿಕೆ ಎರಡನೇ ಅತಿ ಹೆಚ್ಚಿನ ಕಾಣಿಕೆಯಾಗಿದೆ.