

ಭಟ್ಕಳ: ದಿ. ಜನತಾ ಕೋ ಆಪ್ ಕ್ರೆಡಿಟ್ ಸೊಸೈಟಿ ಲಿ. ಸಂಘದ ಠೇವು 186.11 ಕೋಟಿ ರೂ. ಇದ್ದು, ಏರಿಕೆ ಮಟ್ಟ ಕಾಯ್ದುಕೊಂಡು ಬಂದಿದೆ. ಈ ವರ್ಷದಲ್ಲಿ ಸಂಘವು ರೂ. 3.7 ಕೋಟಿ ರೂ. ನಿವ್ವಳ ಲಾಭಗಳಿಸಿದ್ದು, ಶೇ. 10ರಂತೆ ಲಾಭಾಂಶ ನೀಡಲು ಉದ್ದೇಶಿಸಿದೆ ಎಂದು ಸಂಘದ ಅಧ್ಯಕ್ಷ ಮಂಕಾಳ ವೈದ್ಯ ಹೇಳಿದರು.
ಶನಿವಾರ ಪಟ್ಟಣದ ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
ವರ್ಷದ ಆರಂಭಕ್ಕೆ ಸಂಘದಲ್ಲಿ 31274 ಷೇರುದಾರ ಸದಸ್ಯರಿದ್ದು, ಒಟ್ಟು ಸದಸ್ಯರ ಸಂಖ್ಯೆ 32876 ಆಗಿದೆ. ಸಂಘದ ಷೇರು ಬಂಡವಾಳ 11.30 ಕೋಟಿ ಇದ್ದು, 224 ಕೋಟಿ ಸಾಲ ವಿತರಿಸಲಾಗಿದೆ. ಸಾಲದ ವ್ಯವಹಾರದಲ್ಲಿ ಶೇ. 12.78 ರಷ್ಟು ವೃದ್ಧಿಯಾಗಿದೆ.
ಸಂಘವು ಪ್ರತಿ ವರ್ಷ ತಾನು ಗಳಿಸಿದ ಲಾಭಾಂಶದಲ್ಲಿ ತನ್ನ ಕಾರ್ಯಕ್ಷೇತ್ರದಲ್ಲಿ ಬರುವ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಧನ ಸಹಾಯ, ಮನೆ ಮತ್ತು ಆಸ್ತಿ ಕಳೆದುಕೊಂಡ ಸಂಘದ ಸದಸ್ಯರಿಗೆ, ಬಡ ಜನತೆಗೂ ಹಾಗೂ ಮಾರಕ ರೋಗಗಳಿಂದ ಪೀಡಿತರಾದವ ಚಿಕಿತ್ಸೆಗೆ ಧನ ಸಹಾಯ ನೀಡಲಾಗಿದೆ. ಸಾರ್ವಜನಿಕ ಚಟುವಟಿಕೆ, ಕ್ರೀಡೆ ಹಾಗೂ ದೇವಸ್ಥಾನಗಳ ಜೀರ್ಣೇದ್ಧಾರ, ಸರ್ಕಾರಿ ಆಸ್ಪತ್ರೆಗಳಿಗೆ ವಸ್ತು ರೂಪದಲ್ಲಿ ಧನ ಸಹಾಯ ಮಾಡುತ್ತ ಬಂದಿದ್ದೇವೆ. ಸಂಘವು ಈಗಾಗಲೇ ಪ್ರಧಾನ ಕಚೇರಿ ಸೇಲ 17 ಶಾಖೆಗಳನ್ನು ಹೊಂದಿದ್ದು, ಈ ವರ್ಷದಲ್ಲಿ ಸಂಘವು ಲಾಭದಲ್ಲಿ ಮುನ್ನೆಡೆಯುತ್ತಿದೆ ಎಂದು ಹೇಳಿದರು.
ಬ್ಯಾಂಕ್ನ ಉಪಾಧ್ಯಕ್ಷ ಪರಮೇಶ್ವರ ದೇವಾಡಿಗ, ನಾಗಪ್ಪ ಪೊಮ್ಮ ನಾಯ್ಕ, ಕೃಷ್ಣಾ ನಾಯ್ಕ, ಕೃಷ್ಣಾನಂದ ಪೈ, ಪರಮೇಶ್ವರ ನಾಯ್ಕ, ವೆಂಕಟ್ರಮಣ ಮೊಗೇರ, ತಿಮ್ಮಪ್ಪ ನಾಯ್ಕ, ರಾಮಚಂದ್ರ ಕಿಣಿ, ಗೊಯ್ದಗೊಂಡ, ಅಲ್ಬರ್ಟ ಡಿಕೋಸ್ತಾ, ಲಕ್ಷ್ಮೀ ಮಾದೇವ ನಾಯ್ಕ, ಪ್ರ.ಕಾ. ನಾಗೇಶ ದೇವಾಡಿಗ ಹಾಗೂ ನೂರಾರು ಸಂಖ್ಯೆಯ ಸದಸ್ಯರು ಇದ್ದರು.