3.60 ಲಕ್ಷ ಕ್ವಿಂ. ಜೋಳ ಖರೀದಿ ಮಾಡಿ

27SND-04
ಬೆಂಗಳೂರಿನಲ್ಲಿ ಕೃಷಿ ಇಲಾಖೆ ಮುಖ್ಯ ಕಾರ್ಯದರ್ಶಿ ವೈ.ಎಸ್.ಪಾಟೀಲ್‌ಗೆ ರೈತ ಸಂಘ ಹಾಗೂ ಹಸಿರು ಸೇನೆ ರಾಯಚೂರು ಜಿಲ್ಲಾ ಘಟಕ ಮನವಿ ಸಲ್ಲಿಸಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್‌ಪಾಷಾ ದಿದ್ದಿಗಿ, ಜಿಲ್ಲಾಧ್ಯಕ್ಷ ನಾಗನಗೌಡ ಪೋತ್ನಾಳ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಬನ್ನಿಗನೂರು, ತಾಲೂಕು ಅಧ್ಯಕ್ಷ ಚನ್ನನಗೌಡ ಬನ್ನಿಗನೂರು ಇದ್ದರು
Published on

ಸಿಂಧನೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿತ ರೈತರಿಂದ ಜೋಳ ಖರೀದಿಸಬೇಕು ಎಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಸೋಮವಾರ ಬೆಂಗಳೂರಿನಲ್ಲಿ ಕೃಷಿ ಇಲಾಖೆ ಮುಖ್ಯ ಕಾರ್ಯದರ್ಶಿ ವೈ.ಎಸ್.ಪಾಟೀಲ್ ಮೂಲಕ ಕೃಷಿ ಸಚಿವ ಎನ್.ಚಲುವರಾಯಸ್ವಾಮಿಗೆ ಮನವಿ ಸಲ್ಲಿಸಿತು.

ಮುಂಗಾರಿನಲ್ಲಿ ಬೆಳೆದ 13.60 ಲಕ್ಷ ಕ್ವಿಂಟಾಲ್ ಜೋಳ ಖರೀದಿಗೆ ನೋಂದಣಿ ಆಗಿದೆ. ಆದರೆ, ಇದರಲ್ಲಿ 10 ಲಕ್ಷ ಕ್ವಿಂ. ಜೋಳ ಖರೀದಿಸಲಾಗಿದೆ. ಇನ್ನು ಉಳಿದ 3.60 ಲಕ್ಷ ಕ್ವಿಂ. ಜೋಳ ತಕ್ಷಣವೇ ಸರ್ಕಾರ ಖರೀದಿ ಮಾಡಬೇಕು. 2025ರ ಮೇ 22ರಂದು ಆಹಾರ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶದ ಪ್ರಕಾರ ಪ್ರತಿ ಎಕರೆಗೆ 10 ಕ್ವಿಂ, ಗರಿಷ್ಠ 150 ಕ್ವಿಂ. ಇದೆ. ಇದರಿಂದ ಸಣ್ಣ ರೈತರಿಗೆ ತೊಂದರೆಯಾಗುತ್ತಿದೆ. ಈ ಹಿಂದಿನ ಆದೇಶದಂತೆ ಪ್ರತಿ ಎಕರೆಗೆ 20 ಕ್ವಿಂ. ಖರೀದಿ ಮಾಡುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ಜೋಳ ಕಟಾವು ಮಾಡಿ ಐದು ತಿಂಗಳಾಗಿದೆ. ಈಗ ಗುಣಮಟ್ಟ ಪರೀಕ್ಷಿಸುವ ಹೆಸರಿನಲ್ಲಿ ಕೇಂದ್ರ ಸರ್ಕಾರದ ಉಗ್ರಾಣದ ಗ್ರೇಡರ್‌ಗಳು ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರದ ಅಧೀನದಲ್ಲಿರುವ ರಾಜ್ಯ ಉಗ್ರಾಣಗಳಲ್ಲಿ ದಾಸ್ತಾನಿಗೆ ಅವಕಾಶ ನೀಡಿ ಆದೇಶ ಹೊರಡಿಸಬೇಕು. ಹಿಂಗಾರು ಋತುವಿನಲ್ಲಿ ನೋಂದಣಿ ಆಗಿರುವಂಥ ಎಲ್ಲ ರೈತರ ಸಂಪೂರ್ಣ ಜೋಳವನ್ನು ಬೇಷರತ್ ಮೂಲಕ ಖರೀದಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net