

ಮೈಸೂರು: ದೈತ್ಯ ಮೂತ್ರಪಿಂಡದ ಗಡ್ಡೆಯನ್ನು 3.5 ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆ ಮೂಲಕ ಮಣಿಪಾಲ್ ಆಸ್ಪತ್ರೆಯ ನುರಿತ ವೈದ್ಯರ ತಂಡ ಯಶಸ್ಸಿಯಾಗಿ ತೆಗೆದಿದ್ದಾರೆ.
52 ವರ್ಷದ ವೀರಪ್ಪ ಎಂಬ ವ್ಯಕ್ತಿಯೊಬ್ಬರು ಕೆಲವು ತಿಂಗಳಿಂದ ವಿವರಿಸಲಾಗದ ತೂಕ ನಷ್ಟ ಮತ್ತು ನಿರಂತರ ಆಯಾಸದಿಂದ ಬಳಲುತ್ತಿದ್ದರು.
ಅವರು ಈಗಾಗಲೇ ಅಧಿಕ ರಕ್ತದೊತ್ತಡ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹೊಸ ಲಕ್ಷಣಗಳಿಗೆ ಮಾರಣಾಂತಿಕ ಬೃಹತ್ ಮೂತ್ರಪಿಂಡದ ಗಡ್ಡೆ ಕಾರಣ ಎಂಬುದನ್ನು ಅವರು ನಿರೀಕ್ಷಿಸಿರಲಿಲ್ಲ. ಇದನ್ನು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಪತ್ತೆ ಮಾಡಲಾಯಿತು.
ಸ್ಕ್ಯಾನ್‌ಗಳಲ್ಲಿ ಅವರ ಬಲ ಮೂತ್ರಪಿಂಡದಲ್ಲಿ 20 * 16 ಸೆಂ.ಮೀ ಗಾತ್ರದ ದೈತ್ಯ ಕ್ಯಾನ್ಸರ್ ಗಡ್ಡೆ (ರೀನಲ್ ಸೆಲ್ ಕಾರ್ಸಿನೋಮ) ಇರುವುದು ಕಂಡುಬಂದಿತ್ತು.
ಇದು ಮಾರಣಾಂತಿಕ ಪರಿಸ್ಥಿತಿ ಸೃಷ್ಟಿಸಿತು. ಶಸ್ತ್ರ ಚಿಕಿತ್ಸೆ ಸಮಯದಲ್ಲಿ ಅತಿ ಸಣ್ಣ ಚ್ಯುತಿಯೂ ಸಹ ಗಡ್ಡೆಯ ತುಣುಕು ಹೃದಯ ಅಥವಾ ಶ್ವಾಸಕೋಶಕ್ಕೆ ಗಂಭೀರ ಅಪಾಯ ಹೊಂದಿತ್ತು. ಆದ್ದರಿಂದ ಅತಿ ಹೆಚ್ಚು ನಿಖರ ಶಸ್ತ್ರಚಿಕಿತ್ಸೆ ಅಗತ್ಯವಿರುವ ಪರಿಸ್ಥಿತಿ ಉಲ್ಭಣವಾಗಿತ್ತು.
‘ಗಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದು ಅತ್ಯಂತ ಜಠಿಲವಾಗಿತು. ಇಲ್ಲಿ ಯಾವುದೇ ತರಹದ ಲೋಪಗಳಿಗೆ ಶೂನ್ಯ ಅವಕಾಶವಿರುತ್ತದೆ. ಹಾಗಾಗಿ ನಾವು ಪ್ರತಿಯೊಂದು ಸಂಭಾವ್ಯ ತೊಡಕುಗಳನ್ನು ಅಳೆದು ಅವುಗಳನ್ನು ನಿಭಾಯಿಸಲು ಪೂರ್ವಭಾವಿಯಾಗಿಯೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ಮೂತ್ರಶಾಸ್ತ್ರ ಕನ್ಸಲ್ಟೆಂಟ್ ಡಾ.ಟಿ.ಪಿ.ದಿನೇಶ್ ಕುಮಾರ್ ತಿಳಿಸಿದರು.
ಆಸ್ಪತ್ರೆಯ ತಜ್ಞರ ತಂಡದಲ್ಲಿದ್ದ ಮೂತ್ರಶಾಸ್ತದ ಡಾ.ಕಿರಣ್ ಕುಮಾರ್, ಡಾ.ಟಿ.ಪಿ.ದಿನೇಶ್ ಕುಮಾರ್, ಡಾ. ಉಪೇಂದ್ರ ಶೆಣೈ, ಡಾ. ವಾಸುದೇವ್ ಪೈ, ಡಾ.ಕೆ.ಮಹಾದೇವ, ಡಾ. ನಿಶ್ಚಲ್ ಮೊಳ್ಕೇರಿ ಮತ್ತು ಡಾ.ಪಿ.ಕೆ. ಬಾಲಸುಬ್ರಹ್ಮಣ್ಯಂ ಯಶಸ್ಸಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಬಳಿಕ ರೋಗಿ ಒಂದು ದಿನದೊಳಗೆ ಅವರು ಸ್ವಂತವಾಗಿ ಉಸಿರಾಡಲು ಶುರು ಮಾಡಿದರು. ಗಮನಾರ್ಹವಾಗಿ ಸ್ಥಿರ ಸ್ಥಿತಿಗೆ ಬಂದಾಗ ಅವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಯಿತು. 2ನೇ ದಿನದ ಹೊತ್ತಿಗೆ ಅವರು ಬಾಯಿಯಿಂದ ಆಹಾರ ಸೇವನೆಯನ್ನು ಪುನರಾರಂಭಿಸಿದರು. ಆರು ದಿನದ ಬಳಿಕ ಅವರು ಗಡ್ಡೆಮುಕ್ತರಾಗಿ ಆಸ್ಪತ್ರೆಯಿಂದ ತೆರಳಿದರು.