

ಹೊಸನಗರ: ಹಲೋ.. ನಿಮ್ಮ ಸಾಲದ ಬಾಕಿ ಉಳಿದಿದೆ. ಈ ಕೂಡಲೇ ಬ್ಯಾಂಕಿಗೆ ಬಂದು ಹಣ ಕಟ್ಟಿ. ಇಲ್ಲವಾದರೆ ನಿಮಗೆ ಸಮಸ್ಯೆ ಆಗುತ್ತದೆ ಎಂದು ಬ್ಯಾಂಕ್ನಿಂದ ಕರೆಯೊಂದು ಬಂದಿದೆ. ಕರೆ ಸ್ವೀಕರಿಸಿದ ಗ್ರಾಹಕ ರೈತ ಆ ಕೂಡಲೇ ಎದ್ದು ಬಿದ್ದು ಓಡೋಡಿ ಬ್ಯಾಂಕ್ಗೆ ಬಂದಿದ್ದಾರೆ. ತಮ್ಮ ಬಾಕಿ ಕಟ್ಟಿ ಹೋಗಿದ್ದಾರೆ. ಅದು 3.46 ರೂ. ಮಾತ್ರ.
ಇಂತಹದೊಂದು ಪ್ರಕರಣ ಹೊಸನಗರ ತಾಲೂಕಿನ ನಿಟ್ಟೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದು ಗಮನ ಸೆಳೆದಿದೆ.
ನಿಟ್ಟೂರು ಸಮೀಪದ ಬರುವೆ ಗ್ರಾಮದ ಅಮಡೆಯ ರೈತ ಲಕ್ಷ್ಮೀನಾರಾಯಣ ನಿಟ್ಟೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ 35,000 ರೂ. ಕೃಷಿ ಸಾಲ ಪಡೆದಿದ್ದರು. ಸರ್ಕಾರದ ಸಾಲ ಮನ್ನಾ ಯೋಜನೆಯಲ್ಲಿ 32,000 ರೂ. ಮನ್ನಾ ಆಗಿತ್ತು. ಉಳಿದ 3 ಸಾವಿರ ರೂ.ಗಳನ್ನು ಕೆಲವು ತಿಂಗಳ ಹಿಂದೆ ಬಡ್ಡಿ ಸಮೇತ ಕಟ್ಟಿದ್ದರು. ಆದರೆ ಶುಕ್ರವಾರ ಬ್ಯಾಂಕ್ನಿಂದ ಫೋನ್ ಕರೆ ಬಂದ ಹಿನ್ನೆಲೆಯಲ್ಲಿ ಗಾಬರಿಗೊಂಡು ಮಾಡುತ್ತಿದ್ದ ಕೆಲಸ ಬದಿಗೊತ್ತಿ, ಲಾಕ್ಡೌನ್ ಕಾರಣದಿಂದ ಯಾವುದೇ ಬಸ್ ಸೌಲಭ್ಯವೂ ಇಲ್ಲದ ಕುಗ್ರಾಮದಿಂದ 15 ಕಿಮೀ ನಡೆದೇ ಬಂದು ಸಾಲದ ಬಾಕಿ ಚುಕ್ತಾ ಮಾಡಿದರು.
ಕೃಷಿ ಸಾಲ ಮರುಪಾವತಿಗೆ ಬ್ಯಾಂಕ್ಗಳು ರೈತರ ಮೇಲೆ ಒತ್ತಡ ತರುವಂತಿಲ್ಲ ಎಂಬ ಸರ್ಕಾರದ ಆದೇಶವಿದ್ದರೂ ಬಿಡಿಗಾಸಿಗಾಗಿ ಮಾನವೀಯತೆ ಮರೆತು ವರ್ತಿಸಿ ಬ್ಯಾಂಕಿನ ಈ ಕ್ರಮ ಆಕ್ಷೇಪಕ್ಕೆ ಗುರಿಯಾಗಿದೆ.
ಬ್ಯಾಂಕ್ನಿಂದ ಫೋನ್ ಬಂದಾಗ ಗಾಬರಿಯಾಯಿತು. ತೋಟಕ್ಕೆ ಔಷಧ ಸಿಂಪಡಿಸುವುದನ್ನು ಅರ್ಧಕ್ಕೆ ಬಿಟ್ಟು ಬಸ್ ಇಲ್ಲದೆ ಬೈಕ್ ಓಡಿಸಲು ಸಹ ನನಗೆ ಬಾರದಿರುವುದರಿಂದ 15 ಕಿಮೀ ದೂರ ನಡೆದುಕೊಂಡೇ ಧಾವಿಸಿದೆ. ನಿಮ್ಮ ಸಾಲದ 3.46 ರೂ. ಬಾಕಿ ಇದೆ/ ಅದನ್ನು ಕಟ್ಟಿ ಎಂಬ ಸಿಬ್ಬಂದಿ ಮಾತು ಕೇಳಿ ಬಹಳ ಆಶ್ಚರ್ಯವಾಯಿತು. ಕೇವಲ 3.46 ರೂ. ಕಟ್ಟಲು ಒತ್ತಡ ಹೇರಿದ ಬ್ಯಾಂಕ್ ಕ್ರಮದ ಬಗ್ಗೆ ನೋವಿದೆ.
|ಲಕ್ಷ್ಮೀನಾರಾಯಣ, ಬ್ಯಾಂಕ್ ಗ್ರಾಹಕ
ಬ್ಯಾಂಕ್ನಲ್ಲಿ ಆಡಿಟ್ ನಡೆಯುತ್ತಿರುವುದರಿಂದ ಲಕ್ಷ್ಮೀನಾರಾಯಣ ಅವರ ಸಾಲ ರಿನಿವಲ್ ಮಾಡಲು ತುರ್ತಾಗಿ ಅವರ ಸಹಿಯ ಅಗತ್ಯವಿತ್ತು, ಬ್ಯಾಂಕಿನ ನಿಯಮದಂತೆ ಅವರ ಸಾಲದ ಬಾಕಿ ಇರುವ 3.46 ರೂ. ಕಟ್ಟಿಸಿಕೊಂಡು ಅವರ ಸಹಿ ಪಡೆದಿದ್ದೇವೆ.
| ಮ್ಯಾನೇಜರ್, ಕೆನರಾ ಬ್ಯಾಂಕ್ ಶಾಖೆ ನಿಟ್ಟೂರು