

ಕೊಡೇಕಲ್: ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಮತ್ತೆ ಒಳಹರಿವಿನಲ್ಲಿ ಹೆಚ್ಚಳವಾಗಿದ್ದರಿಂದ ಗುರುವಾರ 3.25 ಲಕ್ಷ ಕ್ಯೂಸೆಕ್ ನೀರು ಕೃಷ್ಣೆಗೆ ಬಿಡಲಾಗಿದ್ದು, ಇದರಿಂದ ನದಿ ತೀರದ ಗ್ರಾಮಗಳ ಜನತೆಗೆ ಮತ್ತೆ ಆತಂಕ ಶುರುವಾಗಿದೆ.
ಮಹಾರಾಷ್ಟ್ರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಕ್ಕೆ 3.35ಲಕ್ಷ ಕ್ಯೂಸೆಕ್ ನೀರು ಒಳಹರಿವು ಉಂಟಾಗಿದ್ದರಿಂದ ಜಲಾಶಯದ ನೀರಿನ ಮಟ್ಟ ಕಾಯ್ದುಕೊಂಡು 30 ಗೇಟುಗಳ ಮೂಲಕ 3,25,838 ಕ್ಯೂಸೆಕ್ ನೀರು ಕೃಷ್ಣೆಗೆ ಹರಿಸಲಾಗುತ್ತಿದೆ.
15 ದಿನಗಳಿಂದ ಜಲಾಶಯಕ್ಕೆ ಅಪಾರ ಪ್ರಮಾಣ ನೀರಿನ ಒಳಹರಿವು ಉಂಟಾಗುತ್ತಿದ್ದು, ಬುಧವಾರ ರಾತ್ರಿಯಿಂದ ದಿಢೀರನೇ 3.35ಲಕ್ಷ ಕ್ಯೂಸೆಕ್‍ಗೆ ಏರಿಕೆಯಾಗಿದೆ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಬೆಳಗಾವಿ ಹಾಗೂ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆ ಆರ್ಭಟ ಮುಂದುವರೆದಿರುವ ಕಾರಣ ಕ್ಷಣ ಕ್ಷಣಕ್ಕೂ ಬಸವಸಾಗರದ ನೀರಿನ ಮಟ್ಟದಲ್ಲಿ ಏರಿಳಿತ ಕಂಡು ಬರುತ್ತಿದೆ. ಇದರಿಂದಾಗಿ ಜಲಾಶಯದ ಅಧಿಕಾರಿಗಳು ಕಣ್ಣಿನ ರೆಪ್ಪೆ ಮುಚ್ಚದೆ ಹಗಲು ರಾತ್ರಿ ಎನ್ನದೆ ನೀರಿನ ಸಂಗ್ರಹ ಮಟ್ಟವನ್ನು ಕಾಯ್ದುಕೊಂಡು ಕೃಷ್ಣೆಗೆ ಬಿಡಲಾರಂಭಿಸಿದ್ದಾರೆ.
ಜಲಾಶಯದಿಂದ 3 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿರುವ ಕಾರಣ ನದಿ ತೀರದ ಗ್ರಾಮಗಳಾದ ದೇವರಗಡ್ಡಿ, ಮೇಲಿನ ಗಡ್ಡಿ, ತಂಗಡಬೈಲ, ಅಮ್ಮಾಪುರ ಎಸ್.ಕೆ, ರಾಯನಗೋಳ, ಜುಮಾಲಪುರ, ಜುಮಾಲಪುರ ದೊಡ್ಡ ತಾಂಡಾ, ಗೆದ್ದಲಮರಿ ಗ್ರಾಮಸ್ಥರಿಗೆ ಪ್ರವಾಹ ಭೀತಿ ಎದುರಾಗಿದ್ದು, ನಿತ್ಯ ಆತಂಕದಲ್ಲಿ ದಿನ ದೂಡುವಂತಾಗಿದೆ.
ನದಿ ತೀರದ ಆಮಲಿಂಗೇಶ್ವರ ದೇವಸ್ಥಾನದ ಬಳಿ ಇರುವ ನಡುಗಡ್ಡೆಯೊಂದರಲ್ಲಿ ವಾಸವಾಗಿರುವ 20 ಕುಟುಂಬಗಳು ಎರಡು ದಿನಗಳಿಂದ ಹೊರಗಿನ ಸಂಪರ್ಕ ಕಳೆದುಕೊಂಡಿದೆ. ಆದರೆ ತಾಲೂಕು ಆಡಳಿತ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜಾಗೃತಿ ವಹಿಸುವಂತೆ ಸೂಚನೆ ರವಾನಿಸಿದ್ದಾರೆ.
ದಿನದಿಂದ ದಿನಕ್ಕೆ ಕೃಷ್ಣೆಗೆ ನೀರು ಹೆಚ್ಚುತ್ತಿರುವ ಕಾರಣ ನದಿತೀರದ ಹೊಲಗಳಿಗೆ ನೀರು ನುಗ್ಗಿದ್ದರಿಂದ ಬೆಳೆ ಹಾಳಾಗುವ ಆಂತಕ ರೈತರು ವ್ಯಕ್ತಪಡಿಸಿದ್ದಾರೆ. ಜುಮಾಲಪುರ ಗ್ರಾಮದ 30ರಿಂದ 40 ಎಕರೆ ಭೂಮಿ ಜಲಾವೃತಗೊಂಡಿದೆ.
ಜಲಾಶಯದ ಬಳಿ ಇರುವ ಮುರುಡೇಶ್ವರ ಜಲ ವಿದ್ಯುತ್ ಘಟಕದಿಂದ 12 ಮೇಗಾವ್ಯಾಟ್ ವಿದ್ಯುತ್ ಸಾಮಥ್ರ್ಯ ಮತ್ತು ಕೆಳಭಾಗದಲ್ಲಿರುವ ಭೋರುಕಾ ಜಲ ವಿದ್ಯುತ್ ಘಟಕದಲ್ಲಿ 24 ಮೇಗಾವ್ಯಾಟ್ ಸಾಮಥ್ರ್ಯದ ವಿದ್ಯುತ್ ಉತ್ಪಾದನೆ ವೇಗ ಪಡೆದುಕೊಂಡಿದೆ.
ಜಲಾಶಯಕ್ಕೆ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ವೀಕ್ಷಣೆಗೆ ಶಾಲಾ ಮಕ್ಕಳು ಸೇರಿದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಗೃಹ ರಕ್ಷಕ ದಳದ ಜಿಲ್ಲಾ ಬೋಧಕಿ ವಿದ್ಯಾಕುಮಾರಿ ಭೇಟಿ ನೀಡಿ ಜಾಗೃತಿ ಕುರಿತು ಸ್ಥಳದಲ್ಲಿದ್ದ ಸಿಬ್ಬಂದಿಗೆ ಸೂಚನೆ ನೀಡುವುದರ ಜತೆಗೆ ಮಾರ್ಗದರ್ಶನ ಮಾಡಿದರು.