

ಬೆಂಗಳೂರು: ವಾಹನ ಸವಾರರೇ ಸಂಚಾರ ನಿಯಮ ಉಲ್ಲಂಸುವ ಮುನ್ನ ನೂರು ಬಾರಿ ಯೋಚಿಸಿ ಏಕೆಂದರೆ ಸಂಚಾರ ನಿಯಮ ಉಲ್ಲಂಸಿದವರಿಗೆ ಸಂಚಾರ ಪೊಲೀಸರು ಕೇವಲ ಐನೂರು ಅಥವಾ ಸಾವಿರ ದಂಡ ವಿಧಿಸುತ್ತಾರೆ ಎಂಬ ನಿಮ್ಮ ಊಹೆ ಕೆಲವೊಂದು ಬಾರಿ ತಪ್ಪಾಗಬಹುದು.
ಸುಮಾರು 30 ಸಾವಿರ ರೂ. ಬೆಲೆ ಬಾಳುವ ದ್ವಿಚಕ್ರ ವಾಹನವೊಂದಕ್ಕೆ ನಗರದ ಸಂಚಾರ ಪೊಲೀಸರು ಲಕ್ಷಾಂತರ ರೂ. ದಂಡ ವಿಧಿಸಿದ್ದಾರೆ. ಇದು ಆಶ್ಚರ್ಯವಾದರೂ ನಿಜ.
ಟ್ರಾಫಿಕ್ ಸಿಗ್ನಲ್‌ನಲ್ಲಿ ಅಳವಡಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಐಟಿಎಂಎಸ್ ಕ್ಯಾಮರಾಗಳಲ್ಲಿ ಸೆರೆಯಾದ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ಆಧಿರಿಸಿ ದ್ವಿಚಕ್ರ ವಾಹನವಾದ ಸ್ಕೂಟಿವೊಂದಕ್ಕೆ ೩.೨೨ ಲಕ್ಷ ರೂ.ದಂಡ ವಿಧಿಸಲಾಗಿದೆ. ಈ ವಾಹನದ ಮಾಲೀಕರು ಬರೋಬ್ಬರಿ ೬೪೩ ಬಾರಿ ಸಂಚಾರ ನಿಯಮ ಉಲ್ಲಂಘಸಿರುವ ಹಿನ್ನೆಲೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ದಂಡ ವಿಧಿಸಲಾಗಿದ್ದು, ಈ ಸ್ಕೂಟಿಯ ಮೌಲ್ಯ ಸುಮಾರು ೩೦ ಸಾವಿರ ರೂ.ಎಂದು ತಿಳಿದು ಬಂದಿದೆ.
ಸದ್ಯಕ್ಕೆ ದ್ವಿಚಕ್ರ ವಾಹನವೊಂದರ ವಿರುದ್ಧ ದಾಖಲಾಗಿರುವ ಅತಿ ಹೆಚ್ಚು ಪ್ರಕರಣ ಹಾಗೂ ವಿಧಿಸಲಾಗಿರುವ ದಾಖಲೆಯ ಮೊತ್ತದ ದಂಡ ಇದಾಗಿದೆ ಎನ್ನಲಾಗಿದೆ.
ಆರ್.ಟಿ.ನಗರದ ಗಂಗಾನಗರ ನಿವಾಸಿ ಮಾಲಾ ಎಂಬುವವರ ಹೆಸರಿನಲ್ಲಿರುವ ಕೆಎ-೦೪-ಕೆಎಫ್-೯೦೭೨ ನೋಂದಣಿ ಸಂಖ್ಯೆಯ ಈ ದ್ವಿಚಕ್ರ ವಾಹನ ಆರ್.ಟಿ.ನಗರ ಸುತ್ತಮುತ್ತ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಮಾಡಿದೆ. ಸವಾರ ಹೆಲ್ಮೆಟ್ ಧರಿಸದೆ ಇರುವುದು ಹಾಗೂ ಸಿಗ್ನಲ್ ಜಂಪ್, ಜೀಬ್ರಾ ಲೈನ್ ಕ್ರಾಸ್ ಸೇರಿ ವಿವಿಧ ಸಾಲು ಸಾಲು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಹೆಲ್ಮೆಟ್ ಧರಿಸದಿರುವುದೇ ಅತಿಹೆಚ್ಚು ಪ್ರಕರಣಗಳಾಗಿವೆ.
ಸಂಚಾರ ಪೊಲೀಸರು ಟ್ರಾಫಿಕ್ ಸಿಗ್ನಲ್‌ನಲ್ಲಿ ಅಳವಡಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ(ಐಟಿಎಂಎಸ್) ಕ್ಯಾಮರಾಗಳಲ್ಲಿ ಈ ದ್ವಿಚಕ್ರ ವಾಹನದ ಸಂಚಾರ ನಿಯಮ ಉಲ್ಲಂಘನೆಗಳು ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಈ ದ್ವಿಚಕ್ರ ವಾಹನದ ಪತ್ತೆಗೆ ಮುಂದಾಗಿದ್ದಾರೆ.
ವಾಹನದ ಮಾಲೀಕರು ಶೇ.೫೦ ದಂಡ ವಿನಾಯಿತಿ ನೀಡಿದ್ದ ಸಂದರ್ಭದಲ್ಲಿ ದಂಡ ಪಾವತಿಸಿದ್ದೆ ಆಗಿದ್ದಲ್ಲಿ ಅರ್ಧದಷ್ಟು ದಂಡ ಪಾವತಿಸಬಹುದಾಗಿತ್ತು. ಆದರೀಗ ೩.೨೨ ಲಕ್ಷ ರೂ.ದಂಡವನ್ನು ಪಾವತಿಸಬೇಕಾದ ಅನಿವಾರ್ಯ ಮಾಲೀಕರಿಗೆ ಎದುರಾಗಿದೆ.