

ಚಿತ್ರದುರ್ಗ: ಜಿಲ್ಲಾಡಳಿತ,ಜಿಪಂ,ವಾರ್ತಾ ಇಲಾಖೆ ಹಾಗೂ ನಗರಸಭೆಯಿಂದ ಅ.2 ರಂದು ಬೆಳಗ್ಗೆ 10.30ಕ್ಕೆ ಡಿಸಿ ಕಚೇರಿಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಾರ‌್ಯಕ್ರಮ ಉದ್ಘಾ ಟಿಸುವರು. ಸಂಸದ ಗೋವಿಂದ ಎಂ ಕಾರಜೋಳ ಘನ ಉಪಸ್ಥಿತಿ ವಹಿಸುವರು. ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸುವರು. ಶಾಸಕರು,ವಿಧಾನ ಪರಿಷತ್ ಸದಸ್ಯರು,ನಿಗಮ,ಮಂಡಳಿ,ಪ್ರಾಧಿಕಾರ,ನಗರಸಭೆ,ಆಯೋಗದ ಅಧ್ಯಕ್ಷರು ಸೇರಿದಂತೆ ನಾನಾ ಗಣ್ಯರು ಭಾಗವಹಿಸುವರು. ನಿವೃತ್ತ ಪ್ರಾಚಾರ‌್ಯ ಡಾ.ಎಚ್.ಗುಡ್ಡದೇಶ್ವರಪ್ಪ ಉಪನ್ಯಾಸ ನೀಡುವರು. ಗಾಂಧಿ ಜಯಂತಿ ಅಂಗವಾಗಿ ಅಂದು ಬೆಳಗ್ಗೆ 9ಕ್ಕೆ ನಗರದ ಒನಕೆ ವೃತ್ತ,ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರಮದಾನ ಮತ್ತು ಸ್ವಚ್ಛತಾ ಪ್ರತಿಜ್ಞಾವಿಧಿ ಸ್ವೀಕಾರ ನಡೆಯಲಿದೆ. ಕಾರ‌್ಯ ಕ್ರಮಕ್ಕೆ ಎಲ್ಲ ಅಧಿಕಾರಿ,ಸಿಬ್ಬಂದಿ ತಪ್ಪದೆ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಹಾತ್ಮಾಗಾಂಧೀಜಿ ಜಯಂತಿ ಅಂಗವಾಗಿ ವಾರ್ತಾ ಇಲಾಖೆ ಜಿಲ್ಲೆಯ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ/ಸ್ನಾತಕೋತ್ತರ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟಗೊಂಡಿದೆ. ಪ್ರೌಢಶಾಲಾ ವಿಭಾಗದಲ್ಲಿ ಚಿತ್ರದುರ್ಗ ತಾಲೂಕು ಚವಲಿಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಜೆ.ತನುಜಾ(ಪ್ರ),ಹೊಸದುರ್ಗ ತಾಲೂಕು ಕಂಗುವಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಬಿ.ದೀಕ್ಷಾ(ದ್ವಿ),ಹಿರಿಯೂರು ತಾಲೂಕು ಹರಿಯಬ್ಬೆ ಕರ್ನಾಟಕ ಪಬ್ಲಿಕ್ ಶಾಲೆಯ ಅಪೂರ್ವ(ತೃ)ಬಹುಮಾನ ಪಡೆದಿದ್ದಾರೆ.
ಪಪೂ ಕಾಲೇಜು ವಿಭಾಗದಲ್ಲಿ ಹೊಸದುರ್ಗ ತಾಲೂಕು ಶ್ರೀರಾಂಪುರ ಸರ್ಕಾರಿ ಪಪೂ ಕಾಲೇಜು ವಿದ್ಯಾರ್ಥಿನಿ ಬಿ.ಎನ್.ಕವಿತಾ(ಪ್ರ), ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರು ಎಸ್‌ಜೆಎಂ ಪಪೂ ಕಾಲೇಜಿನ ಎಸ್.ಸಂಜನಾ(ದ್ವಿ),ಚಿತ್ರದುರ್ಗ ತಾಲೂಕು ಸಿರಿಗೆರೆ ಬಿಎಲ್‌ಆರ್ ಪಪೂ ಕಾಲೇಜಿನ ವಿದ್ಯಾರ್ಥಿ ಕಾಳಮ್ಮ(ತೃ)ಬಹುಮಾನ ಪಡೆದಿದ್ದಾರೆ.
ಪದವಿ/ಸ್ನಾತಕೋತ್ತರ ವಿಭಾಗದಲ್ಲಿ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿನಿ ಗೌತಮಿ(ಪ್ರ),ಚಿತ್ರದುರ್ಗ ತಾಲೂಕು ಸಿರಿಗೆರೆ ಎಂ.ಬಸವಯ್ಯ ವಸತಿ ವಿದ್ಯಾಲಯದ ವಿದ್ಯಾರ್ಥಿನಿ ಕೆ.ಎಂ.ಶ್ರೀರಕ್ಷಾ(ದ್ವಿ),ಚಿತ್ರದುರ್ಗ ತಾಲೂಕು ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪಿ.ನಿರ್ಮಿತಾ(ತೃ)ಬಹುಮಾನ ಪಡೆದಿದ್ದಾರೆ. ಗಾಂಧಿ ಜಯಂತಿ ಕಾರ‌್ಯಕ್ರಮದಲ್ಲಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ತಿಳಿಸಿದ್ದಾರೆ.
----