

ಮೈಸೂರು: ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಗೆ (ಯುಎಫ್‌ಬಿಯು) ಸೇರಿದ ಎಲ್ಲ 9 ಸಂಘಟನೆಗಳು ದೇಶಾದ್ಯಂತ ಕರೆ ನೀಡಿರುವ ಬ್ಯಾಂಕ್ ಮುಷ್ಕರಕ್ಕೆ ನಗರದಲ್ಲಿ 2ನೇ ದಿನವೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣವನ್ನು ವಿರೋಧಿಸಲಾಯಿತು.
ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳ ವಹಿವಾಟು ಮಂಗಳವಾರವೂ ಸಂಪೂರ್ಣವಾಗಿ ಸ್ಥಗಿತಗೊಂಡಿತು. ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳಲ್ಲಿ ಹಣ ವರ್ಗಾವಣೆ, ಸ್ವೀಕೃತಿ, ಸಾಲ ಮಂಜೂರಾತಿ, ಚೆಕ್ ಕ್ಲಿಯರೆನ್ಸ್‌ನಂತಹ ಸೇವೆಗಳು ಸ್ತಬ್ಧವಾಗಿತ್ತು. ಇದರಿಂದ ಜನಸಾಮಾನ್ಯರು, ವ್ಯಾಪಾರಸ್ಥರು ಪರದಾಡಿದರು.
ನಜರ್‌ಬಾದ್‌ನ ಕೆನರಾ ಬ್ಯಾಂಕ್ ವಲಯ ಕಚೇರಿ ಆವರಣದಲ್ಲಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಲ್ಲಿ ಪಾಲ್ಗೊಂಡಿದ್ದ ಅಂದಾಜು 200 ಅಧಿಕ ಜನರು ಬ್ಯಾಂಕ್‌ಗಳ ಖಾಸಗೀಕರಣ ಬೇಡವೇ ಬೇಡ ಎಂದು ಘೋಷಣೆ ಮೊಳಗಿಸಿದರು.
ಈ ಮುಷ್ಕರ್‌ಗೆ ಬೆಂಬಲ ಸೂಚಿಸಿದ ಭಾರತೀಯ ಕಿಸಾನ್ ಮೋರ್ಚ್, ಸಿಐಟಿಯು, ಎಐಟಿಯುಸಿನ ಸ್ಥಳೀಯ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾದರು.
ಕೇಂದ್ರ ಹಣಕಾಸು ಸಚಿವರು ಬಜೆಟ್‌ನಲ್ಲಿ ಬ್ಯಾಂಕ್‌ಗಳ ಖಾಸಗೀಕರಣದ ಪ್ರಸ್ತಾವ ಮಾಡಿದ್ದಾರೆ. ಯಾವ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂಬುದನ್ನು ತಿಳಿಸಿಲ್ಲ. ರಹಸ್ಯವಾಗಿಯೇ ಖಾಸಗೀಕರಣ ಮಾಡಲಾಗುತ್ತಿದೆ ಎಂದು ನೌಕರರು ಆರೋಪಿಸಿದರು.
ಬ್ಯಾಂಕ್‌ಗಳು ಖಾಸಗೀಕರಣಗೊಂಡರೆ ಲಾಭವೇ ಪ್ರಮುಖ ಅಂಶವಾಗಿ ಸೇವೆ ಗೌಣವಾಗುತ್ತದೆ. ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಖಾಸಗಿ ಬ್ಯಾಂಕ್‌ಗಳು ಮಾನ್ಯತೆ ನೀಡುವುದಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿ ಮಾತ್ರವಲ್ಲ ಸಾಮಾನ್ಯ ವರ್ಗದವರಿಗೂ ಬ್ಯಾಂಕ್‌ಗಳು ದೂರವಾಗುತ್ತವೆ. ಶ್ರೀಮಂತರಿಗಷ್ಟೇ ಮಾನ್ಯತೆ ನೀಡುವ ಖಾಸಗಿಯವರು ಬಡವರನ್ನು ದೂರವಿಡುತ್ತಾರೆ. ದೇಶದಲ್ಲಿ ಈಗಾಗಲೇ ಇಂತಹ ಸಾಕಷ್ಟು ಉದಾಹರಣೆಗಳಿವೆ ಎಂದು ಅನುಮಾನ ವ್ಯಕ್ತಪಡಿಸಿದರು.
ಖಾಸಗೀಕರಣದ ಪರಿಣಾಮವಾಗಿ ಬ್ಯಾಂಕ್ ಸೇವೆಗಳು ನಗರ ಕೇಂದ್ರಿತ ಆಗಬಹುದು. ಗ್ರಾಮೀಣ ಪ್ರದೇಶದ ಶಾಖೆಗಳು ಮುಚ್ಚುವ ಸಾಧ್ಯತೆ ಇದೆ. ಇಷ್ಟೇ ಅಲ್ಲದೆ ಕೃಷಿ, ಎಂಎಸ್‌ಎಂಇ ವಲಯಗಳಿಗೆ ಸಾಲ ಪಡೆಯಲು ಕಷ್ಟವಾಗಬಹುದು. ದುರ್ಬಲ ವರ್ಗಗಳಿಗೆ ಶೇ.4ರ ಬಡ್ಡಿದರದಲ್ಲಿ ಅಂದಾಜು 15 ಸಾವಿರ ರೂ.ದಷ್ಟು ಕಡಿಮೆ ಮೊತ್ತದ ಸಾಲ ನೀಡುವ ಸೌಲಭ್ಯ ಇಲ್ಲವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಸಾಮಾನ್ಯ ವಿಮೆ, ಭಾರತೀಯ ಜೀವ ವಿಮೆಗಳನ್ನೂ ಖಾಸಗೀಕರಣಗೊಳಿಸಲು ಮುಂದಾಗಿದ್ದು, ಕೇಂದ್ರ ಸರ್ಕಾರದ ಈ ಕ್ರಮವನ್ನು ಖಂಡಿಸಿ ಬುಧವಾರ ಸಾಮಾನ್ಯ ವಿಮೆ ನೌಕರರು ಮತ್ತು ಗುರುವಾರ ಎಲ್‌ಐಸಿ ನೌಕರರು ಬನ್ನಿಮಂಟಪದ ಕಚೇರಿ ಎದುರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.