

ಹುಬ್ಬಳ್ಳಿ: ಜನತಾ ಕರ್ಫ್ಯೂವಿನ 2ನೇ ದಿನವಾದ ಗುರುವಾರವೂ ಹುಬ್ಬಳ್ಳಿಯಲ್ಲಿ ಸಾರ್ವಜನಿಕರು ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.
ಎಂ.ಜಿ. ಮಾರ್ಕೆಟ್, ದುರ್ಗದಬೈಲ್, ಬಾರದಾನಸಾಲ, ಸರಾಫಗಟ್ಟಿ, ಅಕ್ಕಿಹೊಂಡ, ಕೇಶ್ವಾಪುರ ಸೇರಿ ನಗರದ ವಿವಿಧ ಮಾರುಕಟ್ಟೆಗಳಲ್ಲಿ ತರಕಾರಿ, ದಿನಸಿ ಖರೀದಿಸಲು ಜನರು ಪರಸ್ಪರ ಅಂತರ ಮರೆತು ಗುಂಪುಗೂಡಿದ್ದರು. ಕೆಲವರು ಮಾಸ್ಕ್ ಧರಿಸದೇ, ಕರೊನಾ ಸೋಂಕಿನ ಭೀತಿ ಇಲ್ಲದೆ ಖರೀದಿಯಲ್ಲಿ ತೊಡಗಿದ್ದರು.
ಜನರ ದಟ್ಟಣೆಯಿಂದಾಗಿ ಸರಾಫಗಟ್ಟಿ, ಅಕ್ಕಿಹೊಂಡ ಹಾಗೂ ಇತರೆಡೆ ಪೊಲೀಸರು ನಿಗದಿತ ಅವಧಿಗೆ ಮುಂಚೆಯೇ ತರಕಾರಿ ಮಾರಾಟ ಮಾಡುವವರನ್ನು ಚದುರಿಸಿ, ಕಿರಾಣಿ ಅಂಗಡಿಗಳನ್ನು ಮುಚ್ಚಿಸಿದರು. 10 ಗಂಟೆಯ ನಂತರ ನಗರದಲ್ಲಿ ತರಕಾರಿ ಮಾರಾಟ ಸೇರಿ ಸಂಪೂರ್ಣ ಮಾರುಕಟ್ಟೆ ಸ್ತಬ್ಧಗೊಂಡಿತು.
ಅಗತ್ಯ ವಸ್ತುಗಳ ಖರೀದಿಗೆ ವಿಧಿಸಿದ್ದ ಗಡುವಿನ ನಂತರ ವಾಹನ ಸಂಚಾರಕ್ಕೆ ನಿರ್ಬಂಧ ಇದ್ದರೂ ಚನ್ನಮ್ಮ ವೃತ್ತ, ಗೋಕುಲ ರಸ್ತೆ, ಕೇಶ್ವಾಪುರ, ವಿದ್ಯಾನಗರ, ನವನಗರ, ಹಳೇ ಹುಬ್ಬಳ್ಳಿ ಸೇರಿ ವಿವಿಧೆಡೆ ಬೈಕ್ ಹಾಗೂ ಕಾರುಗಳ ಸಂಚಾರ ಕಂಡುಬಂದಿತು. ಪ್ರಮುಖ ವೃತ್ತಗಳಲ್ಲಿ ಪೊಲೀಸರು ವಾಹನಗಳನ್ನು ತಡೆದು, ಅನಗತ್ಯವಾಗಿ ಸಂಚರಿಸುತ್ತಿರುವವರಿಗೆ ದಂಡ ಹಾಕುತ್ತಿದ್ದರು. ಕೆಲ ವಾಹನಗಳನ್ನು ವಶಪಡಿಸಿಕೊಂಡರು. ವೈದ್ಯಕೀಯ ಸೇರಿ ಇತರ ತುರ್ತು ಹಾಗೂ ಅಗತ್ಯ ಸೇವೆಯ ಕರ್ತವ್ಯಗಳಿಗೆ ತೆರಳುತ್ತಿರುವವರು ಪೊಲೀಸರಿಗೆ ಗುರುತಿನ ಚೀಟಿ ತೋರಿಸಿ ಮುಂದೆ ಸಾಗಿದರು.
ಮಧ್ಯಾಹ್ನ ಸುಮಾರು 12.30ರವರೆಗೆ ಪೊಲೀಸರು ವಾಹನಗಳ ತಪಾಸಣೆ ನಡೆಸಿದರು. ನಂತರ ರಸ್ತೆಗಳಲ್ಲಿ ಪೊಲೀಸರು ಕಾಣದ ಕಾರಣ ಕೆಲವೆಡೆ ವಾಹನಗಳ ಸಂಚಾರ ಹೆಚ್ಚು ಕಂಡು ಬಂದಿತು.
ಧಾರವಾಡದಲ್ಲಿ ಕರ್ಫ್ಯೂ ಕಟ್ಟುನಿಟ್ಟು
ಕೋವಿಡ್ 2ನೇ ಅಲೆಯ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿದ್ದು 2ನೇ ದಿನವಾದ ಗುರುವಾರ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿತು. ಸದಾ ವಾಹನಗಳಿಂದ ಗಿಜಿಗುಡುತ್ತಿದ್ದ ಧಾರವಾಡ- ಹುಬ್ಬಳ್ಳಿ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇದ್ದುದರಿಂದ ಮಾರುಕಟ್ಟೆಯಲ್ಲಿ ಜನಸಂಚಾರ ಕಂಡುಬಂತು. ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಪೊಲೀಸ್ ಪಹರೆ ಬಿಗಿಯಾಗಿತ್ತು. ಹೊಸ ಎಪಿಎಂಸಿಯಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಬೆಳಗ್ಗೆ 10ರವರೆಗೆ ವಹಿವಾಟು ನಡೆಯಿತು.
ಕಚೇರಿ ಭಣಭಣ
ಹುಬ್ಬಳ್ಳಿಯ ಮಿನಿ ವಿಧಾನಸೌಧ ಸಾರ್ವಜನಿಕರಿಲ್ಲದೇ ಬಿಕೋ ಎನ್ನುತ್ತಿತ್ತು. ಉಪ ನೋಂದಣಿ ಕಚೇರಿಗೆ ಬೆರಳೆಣಿಕೆಯಷ್ಟು ಜನರು ಮಾತ್ರ ಬಂದಿದ್ದರು. ಸದಾ ಜನದಟ್ಟಣೆ ಇರುತ್ತಿದ್ದ ಭೂಮಿ ಪಹಣಿ ವಿತರಣೆ ಕೇಂದ್ರ ಹಾಗೂ ಅಟಲಜೀ ಜನಸ್ನೇಹಿ ಕೇಂದ್ರಗಳು ಭಣಗುಡುತ್ತಿದ್ದವು. ಮಿನಿ ವಿಧಾನಸೌಧದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿ ಹೊರತುಪಡಿಸಿದರೆ ಜನಸಾಮಾನ್ಯರ ಓಡಾಟ ವಿರಳವಾಗಿತ್ತು.