2ಎ ಮೀಸಲಾತಿ ರದ್ದು ಮಾಡುವ ಮುನ್ಸೂಚನೆ

theneedforreviewofthecastebasedreservationsysteminindia_7572005884
Published on

ಮೈಸೂರು: ಮುಸ್ಲಿಂ ಸಮುದಾಯಕ್ಕೆ ಇದ್ದ ಪ್ರವರ್ಗ 2ಬಿ ಮೀಸಲಾತಿಯನ್ನು ಕಿತ್ತುಕೊಂಡಿರುವ ಬಿಜೆಪಿ ಸರ್ಕಾರದ ಕ್ರಮ ಭವಿಷ್ಯದಲ್ಲಿ ಹಿಂದುಳಿದ ವರ್ಗ ಪ್ರವರ್ಗ 2ಎ ಮೀಸಲಾತಿಯನ್ನೂ ರದ್ದುಗೊಳಿಸುವ ಮುನ್ಸೂಚನೆ ಆಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಹೇಳಿದರು.


ಪ್ರಸ್ತಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಒಬಿಸಿ ಪ್ರವರ್ಗ 2ಎ ಮೀಸಲಾತಿಯನ್ನು ರದ್ದುಪಡಿಸುವ ಸಂಚನ್ನು ಆ ಪಕ್ಷ ಹಾಗೂ ಆರ್‌ಎಸ್‌ಎಸ್ ಅಜೆಂಡ್ ಆಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.


ಶೋಷಿತರು, ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಎಂಬುದು ಸಾಮಾಜಿಕ ನ್ಯಾಯ, ಪರಿಹಾರಾತ್ಮಕ ವ್ಯವಸ್ಥೆ ಕಲ್ಪಿಸುವುದಾಗಿದೆ. ಇದು ಆರ್ಥಿಕ ದೃಷ್ಟಿಕೋನದಿಂದ ಹುಟ್ಟಿದ ವ್ಯವಸ್ಥೆಯಲ್ಲ. ಶತಮಾನಗಳಿಂದ ಅವಕಾಶ ವಂಚಿತವಾಗಿ, ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಸಶಕ್ತಗೊಳಿಸುವ ಕ್ರಮವಾಗಿದೆ. ಆದರೆ, ಬಿಜೆಪಿ ಸರ್ಕಾರ ರಾಜಕೀಯ ಕಾರಣಕ್ಕಾಗಿ, ಅಧಿಕಾರ ಹಿಡಿಯಲು ಮೀಸಲಾತಿ ಆಶಯವನ್ನೇ ಬುಡಮೇಲು ಮಾಡಿದ್ದು, ವಂಚನೆ ಮಾಡಿದೆ ಎಂದು ಕಿಡಿಕಾರಿದರು.


197 ಜಾತಿಗಳಿರುವ ಪ್ರವರ್ಗ 2ಎ ಮೀಸಲಾತಿಯನ್ನು ಹೆಚ್ಚಿಸಬೇಕೆಂಬ ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿಲ್ಲ. ಇದು ಈ ಸಮುದಾಯಗಳಿಗೆ ಮಾಡಿದ ಸಾಮಾಜಿಕ ದ್ರೋಹ. ಹಿಂದುಳಿದ ವರ್ಗಗಳ ಅಂತಃಕರಣವನ್ನು ಅರ್ಥ ಮಾಡಿಕೊಳ್ಳುವುದಿರಲಿ, ಈ ವರ್ಗಗಳನ್ನು ನಾಶ ಮಾಡುವ ಉದ್ದೇಶವನ್ನು ಬಿಜೆಪಿ ಸರ್ಕಾರ ಹೊಂದಿದೆ. ಇದು ಒಬಿಸಿಗಳ ವಿರೋಧಿ ಸರ್ಕಾರ ಎಂದು ದೂರಿದರು.


ಒಬಿಸಿ ಮೀಸಲಾತಿ ರಕ್ಷಣೆ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಬಿಜೆಪಿ ಅಳಿಸಿ, ಮೀಸಲಾತಿ ಉಳಿಸಿ ಅಭಿಯಾನ ಕೈಗೊಳ್ಳಲಾಗಿದೆ. ಚುನಾವಣೆಯಲ್ಲಿ ಈ ಪಕ್ಷಕ್ಕೆ ಹಿಂದುಳಿದ ವರ್ಗದವರು ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net