2ಎ ಮೀಸಲಾತಿಗಾಗಿ 30ರಂದು ಧರಣಿ

panchamasali
Published on

ಹುಬ್ಬಳ್ಳಿ ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿ ಸೌಲಭ್ಯ ಹಾಗೂ ಎಲ್ಲ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಜು. 30ರಂದು ಹುಬ್ಬಳ್ಳಿಯಲ್ಲಿ ಹಕ್ಕೊತ್ತಾಯ ರ‍್ಯಾಲಿ ಹಾಗೂ ಧರಣಿ ಸತ್ಯಾಗ್ರಹ ಆಯೋಜಿಸಲಾಗಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಹೋರಾಟದ ಕುರಿತು ಸಮಾಜದ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9 ಗಂಟೆಗೆ ನೆಹರು ಮೈದಾನದಿಂದ ರ‍್ಯಾಲಿ ನಡೆಸಿ ಚನ್ನಮ್ಮ ವೃತ್ತದಲ್ಲಿ 2 ತಾಸು ಧರಣಿ ಸತ್ಯಾಗ್ರಹ ನಡೆಸಲಾಗುವುದು. ಈ ಮೊದಲು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಇಂದಿನ ಪೂರ್ವಭಾವಿ ಸಭೆಯಲ್ಲಿ ಸಮಾಜದ ಮುಖಂಡರಿಂದ ವ್ಯಕ್ತವಾದ ಅಭಿಪ್ರಾಯದ ಮೇರೆಗೆ ಹುಬ್ಬಳ್ಳಿಯಲ್ಲಿ ನಡೆಸಲಾಗುತ್ತಿದೆ. ಇದರಿಂದ ಕುಂದಗೋಳ, ಕಲಘಟಗಿ ಹಾಗೂ ನವಲಗುಂದ ಭಾಗದ ಪಂಚಮಸಾಲಿ ಬಂಧುಗಳಿಗೆ ಪಾಲ್ಗೊಳ್ಳಲು ಅನುಕೂಲವಾಗಲಿದೆ. ಜಿಲ್ಲಾಧಿಕಾರಿಯವರು ಹುಬ್ಬಳ್ಳಿಗೆ ಬಂದು ನಮ್ಮಿಂದ ಹಕ್ಕೊತ್ತಾಯ ಪತ್ರ ಸ್ವೀಕರಿಸಬೇಕು ಎಂದರು.

ಜೂನ್ 22ರಂದು ನಡೆಸಿದ ಮಾತುಕತೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2 ತಿಂಗಳ ಕಾಲಾವಕಾಶ ಕೇಳಿದ್ದರು. ಅದರಂತೆ ಆಗಸ್ಟ್ 22ಕ್ಕೆ ಗಡುವು ಮುಗಿಯಲಿದೆ. ಸಮಾಜದ ಕಷ್ಟ ಸುಖ ಗೊತ್ತಿರುವುದರಿಂದ ನಮ್ಮ ಬೇಡಿಕೆಗೆ ಮುಖ್ಯಮಂತ್ರಿಯವರು ಸ್ಪಂದಿಸುತ್ತಾರೆ ಎಂಬ ನಂಬಿಕೆ ಇಟ್ಟಿದ್ದೇವೆ. ಸಮಾಜದ ಮೇಲೆ ನಿಷ್ಠೆ ಉಳ್ಳವರು ಯಾವುದೇ ಪಕ್ಷದಲ್ಲಿರಲಿ ಹೋರಾಟ ಬೆಂಬಲ ಕೊಡಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ವಿರೇಶ ಉಂಡಿ, ಬಾಪುಗೌಡ ಪಾಟೀಲ, ವಿಜಯ ಕುಲಕರ್ಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net