ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಇಬ್ಬರು ವಜಾ

ashwini
Published on

ಪಾಂಡವಪುರ : ಹೆಣ್ಣು ಭ್ರೂಣ ಹತ್ಯೆ ಕೃತ್ಯದಲ್ಲಿ ಭಾಗಿಯಾಗಿದ್ದ ಪಟ್ಟಣ ಉಪವಿಭಾಗೀಯ ಆಸ್ಪತ್ರೆಯ ಡಿ ಗ್ರೂಪ್ (ಹೊರಗುತ್ತಿಗೆ) ಇಬ್ಬರು ನೌಕರರನ್ನು ಕೆಲಸದಿಂದ ವಜಾಗೊಳಿಸಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಕೃತ್ಯದ ಪ್ರಮುಖ ಆರೋಪಿ ಅಶ್ವಿನಿ ಹಾಗೂ ಆಕೆಯ ಪತಿ, ಆಂಬುಲೆನ್ಸ್ ಚಾಲಕ ಆನಂದ ಸೇವೆಯಿಂದ ವಜಾಗೊಂಡವರು. ಇಬ್ಬರೂ ವಿಚಾರಣೆ ಸಂದರ್ಭ ತಪ್ಪೊಪ್ಪಿಕೊಂಡಿದ್ದು, ಮತ್ತಷ್ಟು ತನಿಖೆ ಮುಂದುವರಿದಿದೆ. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮುಂಭಾಗದ ಆರೋಗ್ಯ ಇಲಾಖೆ ವಸತಿ ಗೃಹದಲ್ಲೇ ಆರೋಪಿಗಳು ಭ್ರೂಣ ಹತ್ಯೆ ನಡೆಸಿದ್ದರು. ಈ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಬೆಟ್ಟಸ್ವಾಮಿ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಚುರುಕು : ಭ್ರೂಣ ಹತ್ಯೆ ಪ್ರಕರಣ ಜಿಲ್ಲಾದ್ಯಂತ ಸಂಚಲನ ಉಂಟುಮಾಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಕೃತ್ಯದಲ್ಲಿ ಭಾಗಿಯಾಗಿರಬಹುದಾದ ಇತರೆ ಆರೋಪಿಗಳ ಪತ್ತೆಗಾಗಿ ಪ್ರತೇಕ ಮೂರು ತಂಡ ರಚಿಸಿ ತನಿಖೆ ತೀವ್ರಗೊಳಿಸಲಾಗಿದೆ. ಭ್ರೂಣ ಪತ್ತೆಗಾಗಿ ಎಲ್ಲಿ ಸ್ಕ್ಯಾನಿಂಗ್ ಮಾಡಲಾಗಿತ್ತು, ಹತ್ಯೆಗಾಗಿ ನೀಡಲಾದ ಔಷಧಗಳನ್ನು ಎಲ್ಲಿ ಖರೀದಿಸಲಾಗಿತ್ತು, ಔಷಧ ಚೀಟಿ ಬರೆದು ಕೊಟ್ಟವರು ಯಾರು,
ಎಂಬಿತ್ಯಾದಿ ಆಯಾಮಗಳ ಜತೆಗೆ ಆರೋಪಿಗಳ ದೂರವಾಣಿ ಮೂಲಕ ಯಾರೆಲ್ಲರನ್ನೂ
ಸಂಪರ್ಕಿಸಿದ್ದರು ಎಂಬ ಬಗ್ಗೆ ಪೊಲೀಸರು ಬುಧವಾರ ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net