

ಮಂಡ್ಯ: ಕಲೆ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಅಭಿಪ್ರಾಯಿಸಿದರು.
ನಗರದ ಗಾಂಧಿಭವನದಲ್ಲಿ ಕಲಾತಪಸ್ವಿ ಕರ್ನಾಟಕ, ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಕಲಾತಪಸ್ವಿ ಆರ್ಟ್ ಕ್ಲಬ್‌ನ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಕಲಾತಪಸ್ವಿ ಹೆಜ್ಜೆ, ಸರ್ಕಾರಿ ಶಾಲೆಯ ಕಡೆ ಮತ್ತು ಚಿತ್ರಕಲೆ, ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಅಗಾಧವಾದ ಪ್ರತಿಭೆಗಳು ಇರುತ್ತದೆ. ಅವುಗಳನ್ನು ಪರಿವರ್ತನೆ ಮಾಡಿದರೆ ಉಪಯೋಗಕ್ಕೆ ಬರುತ್ತವೆ ಎಂದರು.
ಶಿಕ್ಷಣದ ಜತೆಗೆ ಕಲೆ, ಕ್ರೀಡೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಕೂಡ ಮನುಷ್ಯನಿಗೆ ಅವಶ್ಯಕವಾಗಿದೆ. ಮಕ್ಕಳು ಶಿಕ್ಷಣದ ಜತೆಗೆ ಕಲೆ ಸೇರಿದಂತೆ ಇತರೆ ಸಾಂಸ್ಕೃತಿಕ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು. ಕಲಾತಪಸ್ವಿ ಟ್ರಸ್ಟ್ ಮಕ್ಕಳಲ್ಲಿ ಸಂಸ್ಕೃತಿ ಬೆಳೆಸುವ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯಕ್ರಮ, ಕಲೆಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಈ ರೀತಿಯ ಚಟುವಟಿಕೆ ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಪಾಲಕರು ಪರೋಕ್ಷವಾಗಿ ಭಾಗವಹಿಸುತ್ತಾರೆ ಎಂದು ಹೇಳಿದರು.
ಕಲಾತಪಸ್ವಿ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಎಸ್.ಬಿ.ಅನಿಲ್‌ಕುಮಾರ್, ಉಪಾಧ್ಯಕ್ಷ ಲೋಹಿತ್‌ಕುಮಾರ್, ಶ್ರುತಿ ಇತರರಿದ್ದರು.
ಈ ವೇಳೆ ಚಿತ್ರಕಲೆ, ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಅಂತೆಯೇ ದೇವಮ್ಮ ಚಿಕ್ಕಮರೀಗೌಡ ಸ್ಮರಣಾರ್ಥ ಕಲಾಚಿಗುರು ಪ್ರಶಸ್ತಿಯನ್ನು ತುಷಾರ್ ಚನ್ನೇಗೌಡ, ಮಾತೃಶ್ರೀ ಪ್ರಶಸ್ತಿಯನ್ನು ಶೋಭಾ ಪ್ರದೀಪ್ ಕುಮಾರ್ ಮತ್ತು ಉತ್ತಮ ಕುಟುಂಬ ಪ್ರಶಸ್ತಿಗೆ ಭಾಜನರಾದ ಖುಷಿ ಅವರನ್ನು ಸನ್ಮಾನಿಸಲಾಯಿತು.