ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2, ವೆಬ್ ಕಾಸ್ಟಿಂಗ್ ವ್ಯವಸ್ಥೆ ಪರಿಶೀಲಿಸಿದ ಸಿಇಒ ರಿಶಿ ಆನಂದ

PUC-2 EXAM WEB COSTING
ವಿಜಯಪುರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಒ ರಿಶಿ ಆನಂದ ವೆಬ್‌ಕಾಸ್ಟಿಂಗ್ ಪರಿಶೀಲಿಸಿದರು. ಸಿ.ಕೆ. ಹೊಸಮನಿ, ಬಿ.ಬಿ. ಗಂಗನಹಳ್ಳಿ ಮತ್ತಿತರರಿದ್ದಾರೆ.
Published on

ವಿಜಯಪುರ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಹಿನ್ನೆಲೆ ಸೋಮವಾರ ನಗರದ ಬಾಲಕರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಜಿಪಂ ಸಿಇಒ ರಿಶಿ ಆನಂದ ಅಲ್ಲಿನ ವೆಬ್ ಕಾಸ್ಟಿಂಗ್ ವ್ಯವಸ್ಥೆ ಪರಿಶೀಲಿಸಿದರು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಕೇಂದ್ರಗಳ ಕೊಠಡಿಗಳ ಸಂಖ್ಯೆ, ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ, ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ, ಪರೀಕ್ಷಾ ಕೊಠಡಿ ಮೇಲ್ವಿಚಾರಕರ ನೇಮಕ ಮಾಡಿರುವುದು, ಪರೀಕ್ಷಾ ಕೇಂದ್ರದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿರುವ ಕುರಿತು, ಪರೀಕ್ಷಾ ಕೇಂದ್ರದಲ್ಲಿ ಎಲ್ಲ ಕೊಠಡಿಗಳಿಗೆ ಸಿಸಿ ಟಿವಿ ಮತ್ತು ವೆಬ್ ಕಾಸ್ಟಿಂಗ್ ಅಳವಡಿಸಿರುವ ಕುರಿತು ಪರಿಶೀಲಿಸಿದರು. ಬಳಿಕ ಜಿಪಂ ಆವರಣದಲ್ಲಿರುವ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಅಳವಡಿಸಿರುವ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ವೀಕ್ಷಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಅಭಿರಕ್ಷಕರು ಹಾಗೂ ಸ್ಥಾನಿಕ ಜಾಗೃತ ದಳದವರು ನಿಯಮಾನುಸಾರ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು ಪರೀಕ್ಷಾ ಕೇಂದ್ರಗಳಲ್ಲಿ ಅನ್ಯ ಹಾಗೂ ಬಾಹ್ಯ ವ್ಯಕ್ತಿಗಳು ಯಾರೂ ಇಲ್ಲದೇ ಇರುವುದನ್ನೂ ಸಹ ಪರಿಶೀಲಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ಪರೀಕ್ಷೆಗಳನ್ನು ಕಟ್ಟು-ನಿಟ್ಟಾಗಿ ಶಿಸ್ತಿನಿಂದ ಮತ್ತು ಪರಿಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸುವುದು, ಭದ್ರತೆ ಒದಗಿಸುವುದು, ವಿದ್ಯಾರ್ಥಿಗಳು ಭಯಮುಕ್ತ ಪ್ರಶಾಂತ ವಾತಾವರಣದಲ್ಲಿ ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ವ್ಯವಸ್ಥೆಯನ್ನು ನಿರ್ಮಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸ್ಥಳದಲ್ಲಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ. ಹೊಸಮನಿ, ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಬಿ. ಗಂಗನಹಳ್ಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net