ದ್ವಿತೀಯ ಪಿಯು ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಅಲ್ಲ ಅದು: ಪದವಿಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟನೆ

Phyics question paper leak eduction dept clarification VJP 4 MAR 20
Published on

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯ ಮೊದಲ ದಿನವಾದ ಇಂದು ಪರೀಕ್ಷೆ ಆರಂಭವಾಗಿ ಒಂದು ಗಂಟೆಯ ಬಳಿಕ ವಿಜಯಪುರ ಜಿಲ್ಲೆಯಲ್ಲಿ ಭೌತಶಾಸ್ತ್ರದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಸುದ್ದಿ ವರದಿಯಾಗಿದೆ. ರಾಜ್ಯದಲ್ಲಿ 2 ಲಕ್ಷ ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದು, ಅವರು ಬರೆಯಲು ಆರಂಭಿಸಿದ ಒಂದು ಗಂಟೆಯ ನಂತರ ಈ ಘಟನೆ ಸಂಭವಿಸಿದೆ. ಹೀಗಾಗಿ ಇದು ಪ್ರಶ್ನೆ ಪತ್ರಿಕೆ ಸೋರಿಕೆ ಅಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಬಳಕೆ ಮಾಡದಂತೆ ನಿಷೇಧಿಸಿದ ನಿಯಮವೂ ಜಾರಿಯಲ್ಲಿದೆ. ಅರ್ಥಾತ್ ಮೊಬೈಲ್ ಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವುದು ಅಥವಾ ಬಳಕೆ ಮಾಡುವುದಕ್ಕೆ ಅವಕಾಶ ನಿಷೇಧಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮೂಡಿಸಲು ಸಾಕಷ್ಟು ಪ್ರಚಾರವನ್ನೂ ಮಾಡಲಾಗಿತ್ತು.

ಹೀಗಾಗಿ, ಪ್ರಶ್ನೆ ಪತ್ರಿಕೆಯ ಕೆಲವು ಪುಟಗಳನ್ನು ಮೊಬೈಲ್ ಮೂಲಕ ಫೋಟೊ ತೆಗೆದು ಶೇರ್ ಮಾಡಿದ ಈ ಪ್ರಕರಣವನ್ನು ಪರೀಕ್ಷಾ ಅಕ್ರಮ ಎಂದು ಪರಿಗಣಿಸಲಾಗಿದೆ. ಈ ಅಪರಾಧವನ್ನು ಶಿಕ್ಷಣ ಕಾಯಿದೆಯ ಸೆಕ್ಷನ್ 24(ಎ) ಪ್ರಕಾರ ಮತ್ತು ಜಾರಿಯಲ್ಲಿರುವ ಇತರೆ ಕಾನೂನು ಪ್ರಕಾರ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಅಲ್ಲಿನ ಜಿಲ್ಲಾಧಿಕಾರಿ ಮತ್ತು ಎಸ್​ಪಿಗೆ ಸೂಚಿಸಲಾಗಿದೆ.

ಇನ್ನು ಉಳಿದಂತೆ, ಬೇರೆ ಯಾವುದೇ ತೊಂದರೆ ಆಗಿಲ್ಲ. ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿಯೂ ಯಾವುದೇ ತೊಂದರೆ ಇಲ್ಲದೆ ಪರೀಕ್ಷೆ ಸುಗಮವಾಗಿ ನೆರವೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net