ದ್ವಿತೀಯ ಪಿಯುಸಿ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ: ಶಾಂತೇಶ್ವರ ಕಾಲೇಜಿನಲ್ಲಿ ನಡೆದುದೇನು?

Phyics question paper leak 0 VJP 4 MAR 20
Published on

ಇಂಡಿ/ವಿಜಯಪುರ: ದ್ವಿತೀಯ ಪಿಯುಸಿ ಪರೀಕ್ಷೆ ಮೊದಲ ದಿನವೇ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ !  ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ಪಪೂ ಕಾಲೇಜಿನಲ್ಲಿ ಬುಧವಾರ ಇಂಥದ್ದೊಂದು ಘಟನೆ ನಡೆದಿದ್ದು ಅಭ್ಯರ್ಥಿ ಸಹಿತ ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದ್ದು ಪರೀಕ್ಷಾ ಮೇಲ್ವಿಚಾರಕಿಯನ್ನು ಅಮಾನತು ಮಾಡಲು ಶಿಫಾರಸ್ಸು ಮಾಡಲಾಗಿದೆ.

ಮುರುಗೇಂದ್ರ ಹಿರೇಮಠ ಹಾಗೂ ಬಾಗಪ್ಪ ಸಗರ ಎಂಬುವರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. ಪರೀಕ್ಷಾ ಮೇಲ್ವಿಚಾರಕಿ ಶ್ರೀಮತಿ ಎಂ.ಡಿ. ನಾರಾಯಣಕರ ಇವರ ಅಮಾನತ್ತಿಗೆ ಸೂಚಿಸಲಾಗಿದೆ. ಅತೀ ಸೂಕ್ಷ್ಮ ಕೇಂದ್ರವಾಗಿರುವ ಶಾಂತೇಶ್ವರ ಕಾಲೇಜಿನ ಒಟ್ಟು 7 ಪರೀಕ್ಷಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಸದರಿ ಕೇಂದ್ರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

ಘಟನೆ ವಿವರ: ಬುಧವಾರ ಬೆಳಗ್ಗೆ 10.30ಕ್ಕೆ ಭೌತಶಾಸ್ತ್ರ ಪರೀಕ್ಷೆ ಆರಂಭವಾಗುತ್ತಿದ್ದಂತೆ ಶಾಂತೇಶ್ವರ ಕಾಲೇಜಿನ ಹಿಂಬದಿಯ ಬಡಾವಣೆಯಿಂದ ನಕಲು ಪೂರೈಕೆಗೆ ತಂಡವೊಂದು ಕಾತರಿಸಿ ನಿಂತಿತ್ತು. ಈ ವೇಳೆ ಬಾಗಪ್ಪ ಸಗರ ಮಾಳಿಗೆ ಮೇಲಿಂದ ಹಿಂಬದಿ ಜಿಗಿದು ಪರೀಕ್ಷಾ ಕೊಠಡಿಯ ಕಿಟಕಿ ಬಳಿ ಬಂದಿದ್ದಾನೆ. ಮುರುಗೇಂದ್ರ ಪ್ರಶ್ನೆ ಪತ್ರಿಕೆ ಹೊರಚಾಚಿದ್ದು ಬಾಗಪ್ಪ ಅದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಆಗ ಬಾಗಪ್ಪನ ಸಹಿತ ಪ್ರಶ್ನೆ ಪತ್ರಿಕೆ ಚಿತ್ರದಲ್ಲಿ ಸೆರೆಯಾಗಿದೆ. ಸದರಿ ಫೋಟೊಗಳು ವಾಟ್ಸ್‌ಪ್‌ಗಳಲ್ಲಿ ಹರಿದಾಡುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ಪ್ರಕರಣ ಶಿಕ್ಷಣ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಯವರಿಗೂ ತಲುಪಿ ಅವರ ಸೂಚನೆ ಮೇರೆಗೆ ಜಿಲ್ಲಾಡಳಿತ ಸ್ಥಳಕ್ಕೆ ದೌಡಾಯಿಸಿದೆ. ಪರಿಶೀಲನೆ ವೇಳೆ ಫೋಟೊ ಕ್ಲಿಕ್ಕಿಸಿಕೊಂಡಾತ ತಪ್ಪೊಪ್ಪಿಕೊಂಡಿದ್ದಾನೆ. ಜತೆಗೆ ಪರೀಕ್ಷಾ ಕೇಂದ್ರ ಜಾಲಾಡಲಾಗಿ ಹೆಚ್ಚಿನವರು ನಕಲು ಮಾಡುತ್ತಿದ್ದ ಅಂಶ ಬಯಲಾಗಿದೆ. ಪ್ರಶ್ನೆ ಪತ್ರಿಕೆ ತೋರಿಸಿದ ಮುರುೇಂದ್ರ ಹಾಗೂ ಬಾಗಪ್ಪ ಸಗರ ಈತನ ಮೇಲೆ ಮಾಲ್ ಪ್ರಾಕ್ಟಿಸ್ ಕೇಸ್ ದಾಖಲಿಸಲಾಗಿದೆ. ತನಿಖೆ ಮುಂದುವರಿದಿರುವುದಾಗಿ ಎಸ್‌ಪಿ ಅನುಪಮ ಅಗರವಾಲ ಪ್ರತಿಕ್ರಿಯಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಲೀಕ್ ಆಗಿಲ್ಲ. ಪರೀಕ್ಷೆ ಆರಂಭದ ನಂತರ ಮೊಬೈಲ್‌ನಲ್ಲಿ ಪ್ರಶ್ನೆ ಪತ್ರಿಕೆ ಸೆರೆ ಹಿಡಿಯಲಾಗಿದೆ. ತ್ವರಿತವಾಗಿ ಪರೀಕ್ಷಾ ಕೇಂದ್ರಕ್ಕೆ ತರಳಿ ಸೂಕ್ರ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಘಟನೆ ಕೊಠಡಿಯ ಹೊರಭಾಗದಲ್ಲಿ ನಡೆದಿದೆ. ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net