ಸಿಎನ್‌ಸಿಯ ೨ನೇ ಹಂತದ ಪಾದಯಾತ್ರೆ ಆರಂಭ

28adarshkdga3
Published on

ಮಡಿಕೇರಿ: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ೯ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಆರಂಭಿಸಿರುವ ಪಾದಯಾತ್ರೆಯ ೨ನೇ ಹಂತ ಕುರುಳಿ ಅಂಬಲ ಮಂದ್‌ನಿಂದ ಆರಂಭಗೊಂಡಿತು.


ಮಡಿಕೇರಿ ತಾಲೂಕು ಕುರುಳಿ ಅಂಬಲ ಮಂದ್, ನೆಲ್ಲಿಯಪುದಿಕೇರಿ ನಾಡ್ ಕಟ್ಟೆಮಾಡ್ ಮತ್ತು ಅರೆಕಾಡ್ ಮಂದ್‌ನಲ್ಲಿ ಪಾದಯಾತ್ರೆ ಹಾಗೂ ಕೊಡವ ಜಾಗೃತಿ ಸಭೆ ನಡೆಯಿತು. ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಬೇಡಿಕೆ ಈಡೇರುವವರೆಗೆ ಸಿಎನ್‌ಸಿಯ ಹೋರಾಟ ಮುಂದುವರೆಯಲಿದೆ. ಸರ್ವ ಕೊಡವರು ಹೋರಾಟದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.


ದೇಶದ ಸಂವಿಧಾನದಡಿ ಸೂಕ್ಷ್ಮ ಬುಡಕಟ್ಟು ಜನಾಂಗವಾಗಿರುವ ಕೊಡವರು ತಮ್ಮ ಹಕ್ಕುಗಳನ್ನು ಪಡೆಯಲು ಸ್ವತಂತ್ರರು, ಆದರೆ ಪ್ರತಿಯೊಬ್ಬರು ಜಾಗೃತರಾಗಬೇಕು. ಭೌಗೋಳಿಕ-ರಾಜಕೀಯ ಸ್ವಾಯತ್ತತೆಯು ಯುಎನ್/ವಿಶ್ವ ರಾಷ್ಟ್ರ ಸಂಸ್ಥೆ ಚಾರ್ಟರ್‌ನಲ್ಲಿ ಪ್ರತಿಪಾದಿಸಲ್ಪಟ್ಟ ನಿರ್ದಿಷ್ಟ ಪ್ರದೇಶದ ಪ್ರಾಚೀನ ಸೂಕ್ಷ್ಮ-ಮಿನಿಸ್ಕ್ಯೂಲ್ ರೇಸ್ ಅನ್ನು ರಕ್ಷಿಸಲು, ಉತ್ತೇಜಿಸಲು ಮತ್ತು ಪುನರುಜ್ಜೀವನಗೊಳಿಸಲು ಮೂಲಭೂತ ನೀತಿಯಾಗಿ ಸಾಂವಿಧಾನಿಕ ವ್ಯವಸ್ಥೆಯಾಗಿದೆ ಎಂದರು.


ಸಿಎನ್‌ಸಿ ಮೂಲಕ ಜನರ ಆಕಾಂಕ್ಷೆಗಳನ್ನು ಪ್ರತಿಧ್ವನಿಸಲು, ಮೂಲೆ ಮೂಲೆಗಳಲ್ಲಿ ಯುಎನ್/ವಿಶ್ವ ರಾಷ್ಟ್ರ ಸಂಸ್ಥೆ ಚಾರ್ಟರ್‌ನಲ್ಲಿ ಪ್ರತಿಪಾದಿಸಿರುವ ಸಾರ್ವತ್ರಿಕ ಕಾನೂನಿನ ಪ್ರಕಾರ ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ ಸ್ವಯಂ ಆಡಳಿತ ಹಾಗೂ ಸ್ವಯಂ ನಿರ್ಣಯದ ಹಕ್ಕುಗಳನ್ನು ಸ್ಥಾಪಿಸಲು ಆರ್ಟಿಕಲ್ ೩೨ ಅನ್ನು ಈ ಮೂಲಕ ಪ್ರಚಾರ ಮಾಡುತ್ತಿದ್ದೇವೆ. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಯತ್ತತೆಯೂ ಕರ್ನಾಟಕದ ಸ್ವಾಧೀನದ ಅಡಿಯಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಪೂರಕವಾಗಿರುತ್ತದೆ ಎಂದು ನಾಚಪ್ಪ ಹೇಳಿದರು.


ಈ ಸಂದರ್ಭದಲ್ಲಿ ಅಜ್ಜಂಡ ಅಪ್ಪಯ್ಯ, ಅಚ್ಚಕಳೇರ ಸಂತು ಅಯ್ಯಪ್ಪ, ಅಚ್ಚಕಳೇರ ನವೀನ್ ಮೊಣ್ಣಪ್ಪ, ನಂದೇಟಿರ ರವಿ ಸುಬ್ಬಯ್ಯ, ಅಚ್ಚಕಳೇರ ಸಜನ್, ಬಡಕಡ ನಿಗು ಸುಬ್ರಮಣಿ, ಸಾದೇರ ಜೀವನ್, ಬೊಡ್ಡಂಡ ಮಂದಣ್ಣ, ಮಂಡೇಪಂಡ ಮುತ್ತಪ್ಪ, ಪಳಂಗಡ ಲವ, ಅಜ್ಜಂಡ ಉತ್ತಪ್ಪ, ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net