ಕೆಎಂಟಿಆರ್​ಸಿ ಕಟ್ಟಡ ಉದ್ಘಾಟನೆ ನಾಳೆ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಗರದ ಗೋಕುಲ ರಸ್ತೆ ಕೈಗಾರಿಕಾ ವಸಾಹತು ಪ್ರದೇಶದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಕರ್ನಾಟಕ ಮಟೀರಿಯಲ್ ಟೆಸ್ಟಿಂಗ್ ಆಂಡ್ ರಿಸರ್ಚ್ ಸೆಂಟರ್ (ಕೆಎಂಟಿಆರ್​ಸಿ)ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜು. 12ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ ಎಂದು ಸೆಂಟರ್​ನ ಅಧ್ಯಕ್ಷ ಎಂ.ಕೆ. ಪಾಟೀಲ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಸಚಿವರಾದ ಎಂ.ಬಿ. ಪಾಟೀಲ, ಶರಣಬಸಪ್ಪ ದರ್ಶನಾಪುರ, ಸಂತೋಷ ಲಾಡ್, ಶಾಸಕ ಮಹೇಶ ಟೆಂಗಿನಕಾಯಿ ಪಾಲ್ಗೊಳ್ಳುವರು ಎಂದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಎಂಟಿಆರ್​ಸಿಗೆ ಸುಸಜ್ಜಿತ ಕಟ್ಟಡ ಹೊಂದಲು 4 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅವರು 4 ಕೋಟಿ ರೂ.ಗೆ ಮಂಜೂರಾತಿ ಕೊಟ್ಟು ಮೊದಲ ಹಂತವಾಗಿ 2 ಕೋಟಿ ರೂ. ಬಿಡುಗಡೆ ಮಾಡಿದ್ದರು. ಆ ಹಣದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಿದ್ದೇವೆ. ಸೆಂಟರ್​ನ ಕಾರ್ಯಯೋಜನೆ ವಿಸ್ತರಿಸಲು ಹಾಗೂ ಅತ್ಯಾಧುನಿಕ ಉಪಕರಣಗಳ ಖರೀದಿ ಸೇರಿ ಇನ್ನು 5 ಕೋಟಿ ರೂ. ಅವಶ್ಯಕತೆ ಇದ್ದು, ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಕೋರುತ್ತೇವೆ ಎಂದು ಹೇಳಿದರು.

ಕೆಎಂಟಿಆರ್​ಸಿ, ಉತ್ತರ ಕರ್ನಾಟಕದಲ್ಲಿಯೇ ಪ್ರತಿಷ್ಠಿತ ಎನ್​ಎಬಿಎಲ್ ಪ್ರಮಾಣಪತ್ರ ಹೊಂದಿದ ಏಕೈಕ ಪ್ರಯೋಗಾಲಯವಾಗಿದೆ. ಈ ಕೇಂದ್ರವು ವಸ್ತುಗಳ ಗುಣಮಟ್ಟ ಪರೀಕ್ಷಿಸಲು ಮೆಕ್ಯಾನಿಕಲ್, ಕೆಮಿಕಲ್ ಟೆಸ್ಟಿಂಗ್ ವಿಭಾಗ, ಮೆಕ್ಯಾನಿಕಲ್ ಇನ್​ಸ್ಟ್ರುಮೆಂಟ್ ಕ್ಯಾಲಿಬ್ರೇಷನ್ ವಿಭಾಗವನ್ನು ಹೊಂದಿದೆ. ನೀರು ಹಾಗೂ ಮಣ್ಣಿನ ಗುಣಮಟ್ಟ ಪರೀಕ್ಷಿಸಲು ಅತ್ಯಾಧುನಿಕ ಯಂತ್ರೋಪಕರಣಗಳನ್ನು ರಾಜ್ಯ ಸರ್ಕಾರದ ಅಸೈಡ್ ಯೋಜನೆಯಡಿ ಸ್ಥಾಪಿಸಲಾಗಿದೆ. ನಮ್ಮಲ್ಲಿ ಕರ್ನಾಟಕ ಮಾತ್ರವಲ್ಲ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದಲೂ ಕೈಗಾರಿಕೆಗಳು ಉತ್ಪಾದನೆಗೆ ಬಳಸುವ ವಸ್ತುಗಳು ಗುಣಮಟ್ಟ ಪರೀಕ್ಷಣೆಗೆ ಬರುತ್ತವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೆಂಟರ್​ನ ಉಪಾಧ್ಯಕ್ಷ ನಿಂಗಣ್ಣ ಬಿರಾದಾರ, ಮಾಜಿ ಅಧ್ಯಕ್ಷ ನಾಗರಾಜ ದಿವಟೆ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ ಟೆಂಗಿನಕಾಯಿ, ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಲಕರ್ಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net