

ಡಾ.ಜಾಮದಾರ, ಹೊರಟ್ಟಿ ಹೇಳಿಕೆಗೆ ಶ್ರೀಗಳ ಪ್ರತ್ಯುತ್ತರ
ಗದಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಈಗಾಗಲೇ ಭೇಟಿ ಮಾಡಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ನಿಟ್ಟಿನಲ್ಲಿ ಮನವಿ ಮಾಡಲಾಗಿತ್ತು. ಅವರು ಒಂದು ತಿಂಗಳ ಕಾಲಾವಕಾಶ ಕೇಳಿದ್ದರು. ಹಲವಾರು ತಿಂಗಳುಗಳು ಕಳೆದರೂ ಅವರು ಸಭೆ ಕರೆಯಲಿಲ್ಲ, ಪದೇ ಪದೇ ಮುಖ್ಯಮಂತ್ರಿಗಳ ಮನೆಗೆ ಹೋಗಿ ಕೇಳುವುದು ಸರಿಯಲ್ಲ ನಮ್ಮ ಸಂವಿಧಾನ ಬದ್ಧ ಹಕ್ಕನ್ನು ಹೋರಾಟದ ಮೂಲಕವೇ ಪಡೆಯಲು ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಲಾಗುತ್ತಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಶನಿವಾರ ಗದಗ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದಿನ ಸರ್ಕಾರದ ಕೊನೆ ಕೊನೆಗೆ ನಮ್ಮ ಹೋರಾಟಕ್ಕೆ ಮಣಿದು 2ಡಿ ಮೀಸಲಾತಿಯನ್ನು ನೀಡಿತ್ತು, ಆದರೆ ಅದು ಅನುಷ್ಠಾನವಾಗುವ ಪೂರ್ವದಲ್ಲಿಯೇ ಚುನಾವಣಾ ನೀತಿ ಸಂಹಿತೆ ಬಂದ ಹಿನ್ನೆಲೆಯಲ್ಲಿ ಅದು ಜಾರಿಯಾಗಿಲ್ಲ, ಅದಕ್ಕಾಗಿ ನೂತನ ಸರ್ಕಾರ ನಮ್ಮ ಹಿಂದಿನ ಬೇಡಿಕೆಯಂತೆಯೇ 2ಎ ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಲು ಈ ಇಷ್ಟಲಿಂಗ ಪೂಜೆಯ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು
ಡಾ.ಜಾಮದಾರ ಹೇಳಿಕೆಗೆ ಪ್ರತ್ಯುತ್ತರ:
ಲಿಂಗಾಯತರಿಗೆ ಮೀಸಲಾತಿ ಸಾಧ್ಯವೇ ಇಲ್ಲ ಎಂದು ಡಾ. ಜಾಮದಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈಗಾಗಲೇ ಲಿಂಗಾಯತ ಸಮುದಾಯದ ಹಲವು ಸಮುದಾಯಗಳು 2ಎ, 3ಬಿ ಮೀಸಲಾತಿ ಪಡೆದಿವೆ. ಅಧ್ಯಯನಶೀಲರು ಪುಸ್ತಕಗಳ ಆಧಾರದಲ್ಲಿ ಮಾತನಾಡುತ್ತಾರೆ. ನಾವು ಹೋರಾಟದ ಹಾದಿಯಲ್ಲಿ ಮಾತನಾಡುತ್ತೇವೆ ಎಂದರು.
ಹೊರಟ್ಟಿ ಅವರಿಗೆ ತೊಂದರೆ ಏನು?
ಸ್ವಾಮೀಜಿಗಳು ರಾಜಕಾರಣಿಗಳಂತೆ ಬೀದಿಗಿಳಿದು ಹೋರಾಟ ಮಾಡಬಾರದು ಎಂದಿರುವ ಬಸವರಾಜ ಹೊರಟ್ಟಿ ಹೇಳಿಕೆಗೆ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಶ್ರೀಗಳು, ಅವರ ಸಮುದಾಯಕ್ಕೆ ಈಗಾಗಲೇ ಸಂವಿಧಾನ ಬದ್ಧ ಮೀಸಲಾತಿ ದೊರೆತಿದೆ. ಇನ್ನೊಂದು ಸಮುದಾಯದವರು ಮೀಸಲಾಯಿ ಕೇಳಿದರೆ ಇವರಿಗೇನು ತೊಂದರೆ?, ದಯವಿಟ್ಟು ನೀವು(ಬಸವರಾಜ ಹೊರಟ್ಟಿ) ಹಿರಿಯರಾಗಿದ್ದು, ನಮ್ಮ ನ್ಯಾಯ ಸಮ್ಮತ ಹೋರಾಟವನ್ನು ಬೆಂಬಲಿಸಿ. ಇಲ್ಲವೇ ಸುಮ್ಮನ್ನಿರಬೇಕು. ಸಮಾಜದಲ್ಲಿ ಗೊಂದಲ ಸೃಷ್ಟಿಸಬೇಡಿ ಎಂದರು.
ಅನಿಲ ಪಾಟೀಲ, ಅಯ್ಯಪ್ಪ ಅಂಗಡಿ, ಮಾಹಾಂತೇಶ ನಲವಡಿ, ಸ್ವಾತಿ ಅಕ್ಕಿ ಮುಂತಾದವರು ಹಾಜರಿದ್ದರು.