ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಎಂಗೆ ಡಿ.19ರವರೆಗೆ ಗಡುವು

VJP PANCHAMASALI (2)
Published on

ವಿಜಯಪುರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಈಗಾಗಲೇ ಸಾಕಷ್ಟು ಹೋರಾಟ ಹಮ್ಮಿಕೊಳ್ಳಲಾಗಿದ್ದು, ಡಿ.19ರಂದು ಸಿಎಂ ಬಸವರಾಜ ಬೊಮ್ಮಾಯಿ ಬೇಡಿಕೆ ಈಡೇರಿಸದೇ ಹೋದರೆ ಡಿ.22ರಂದು 25 ಲಕ್ಷ ಜನರನ್ನು ಸೇರಿಸಿ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸಮಿತಿ ಮುಖಂಡರು ತಿಳಿಸಿದ್ದಾರೆ.

ಸಮಿತಿ ಗೌರವಾಧ್ಯಕ್ಷ ಎಂ.ಎಸ್. ರುದ್ರಗೌಡರ ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ವಿಷಯ ತಿಳಿಸಿ, ಈಗಾಗಲೇ ಬೃಹತ್ ಪಾದಯಾತ್ರೆ, ರಕ್ತದಲ್ಲಿ ಪತ್ರ, ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹೀಗೆ ಸಾಕಷ್ಟು ಹೋರಾಟ ಹಮ್ಮಿಕೊಳ್ಳಲಾಗಿದೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಹಿನ್ನೆಲೆ ಹೋರಾಟ ಕೈ ಬಿಡಲಾಗಿತ್ತು. ಇದೀಗ ಬೆಳಗಾವಿ ಅಧಿವೇಶನ ವೇಳೆ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ತಿಳಿಸಿದರು.

ಸಿಎಂ ಬಸವರಾಜ ಬೊಮ್ಮಾಯಿಂದ ಮಾತ್ರ ಈ ಬೇಡಿಕೆ ಈಡೇರಿಕೆ ಸಾಧ್ಯ. ಈಗಾಗಲೇ ಈ ಬೇಡಿಕೆ ಈಡೇರುವ ಲಕ್ಷಣಗಳು ಗೋಚರಿಸುತ್ತಿದೆ. ನಮಗೆ ಭರವಸೆ ಇದೆ. ಖಂಡಿತ ಸಿಎಂ ಬೊಮ್ಮಾಯಿ ಹೋರಾಟಕ್ಕೆ ಅವಕಾಶ ಕೊಡದಂತೆ ಬೇಡಿಕೆ ಈಡೇರಿಸುತ್ತಾರೆ. ಹಾಗೊಂದು ವೇಳೆ ಬೊಮ್ಮಾಯಿ ಅವರು ಡಿ. 19 ರೊಳಗೆ ಬೇಡಿಕೆ ಈಡೇರಿಸಿದರೆ ಹೋರಾಟದ ಬದಲಾಗಿ ಅದೇ 25 ಲಕ್ಷ ಜನರ ಸಮ್ಮುಖದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಗೌರವಿಸಲಾಗುವುದು ಎಂದರು.

ಮುಖಂಡ ಬಿ.ಎಂ. ಪಾಟೀಲ, ಎಸ್.ಎ. ಪಾಟೀಲ, ಬಿ.ಎಸ್. ಬಿರಾದಾರ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಮಲ್ಲಿಕಾರ್ಜುನ ಹಂಗರಗಿ, ಚಂದ್ರಶೇಖರ ನಾಗರಬೆಟ್ಟ, ಅಶೋಕ ಎಂ. ಬಿರಾದಾರ, ಹಿರೇಬೇವನೂರ ಗ್ರಾಪಂ ಸದಸ್ಯ ಅಯ್ಯನಗೌಡ ಬಿರಾದಾರ, ರಾಜು ಕುಲಕರ್ಣಿ, ಶಾಂತೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಇಂಡಿ ಪಿಕೆಪಿಎಸ್ ಅಧ್ಯಕ್ಷ ರಾಜುಗೌಡ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net