

ಸಿಂದಗಿ: ಮುಖ್ಯ ಬೇಡಿಕೆಯಾಗಿರುವ 2ಎ ಮೀಸಲಾತಿ ಈಡೇರಲು ನಮ್ಮವರೊಬ್ಬರು ಮುಖ್ಯಮಂತ್ರಿ ಆಗಬೇಕು. ಆಗಲೇ ನಾವು ಉದ್ಧಾರವಾಗುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಗುರುವಾರ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳ ಹಿಂದೆ ಸಿಂದಗಿಯ ರಾಣಿ ಚನ್ನಮ್ಮ ವೃತ್ತದ ಸಮಾಲೋಚನೆ ಸಭೆಯಿಂದಲೇ 2ಎ ಮೀಸಲಾತಿ ಹೋರಾಟಕ್ಕೆ ಮುನ್ನುಡಿ ಸಿಕ್ಕಿದೆ. ನಮ್ಮ ಹೋರಾಟ ಸುವರ್ಣಸೌಧಕ್ಕೆ ತೆರಳಿ ಉಪವಾಸ ಸತ್ಯಾಗ್ರಹದ ಮೂಲಕ ಸಮಾಜದ ಬೇಡಿಕೆ ಮತ್ತು ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸಿದ್ದೇವೆ. ಸತ್ಯಾಗ್ರಹದಲ್ಲಿ ಸಿಂದಗಿಯ ಸಮಾಜ ಬಾಂಧವರದ್ದೇ ಸಿಂಹಪಾಲಿತ್ತು. ನಿಪ್ಪಾಣಿ, ಜಮಖಂಡಿ ಹಾಗೂ ಚಡಚಣದಲ್ಲಿ ನಮ್ಮೆಲ್ಲರ ಬದುಕಿನ 2ಎ ಮೀಸಲು ಹೋರಾಟ ಆರಂಭಗೊಳ್ಳುತ್ತಿದೆ ಎಂದರು.
ಚಡಚಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆ.24 ರಂದು ಲಿಂಗಾಯತ ಪಂಚಮಸಾಲಿ ಮೀಸಲಾತಿ ಸಂಕಲ್ಪಕ್ಕಾಗಿ ಜಿಲ್ಲಾ ಮಟ್ಟದ ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿ ಪುನಃ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಹೋರಾಟದಲ್ಲಿ ಪಂಚಮಸಾಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಹೇಳಿದರು.
ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಸಿ.ಎಂ.ಮನಗೂಳಿ ಕಾಲೇಜಿನ ಅಧ್ಯಾಪಕ ಡಾ.ಅರವಿಂದ ಮನಗೂಳಿ ಹಾಗೂ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ ಮಾತನಾಡಿ, 718 ಕಿ.ಮೀ. ಪಾದಯಾತ್ರೆ ಮೂಲಕ ಪಂಚಮಸಾಲಿಗಳ ಮೀಸಲಾತಿ ಹೋರಾಟದ ಜತೆಗೆ ಸಂಘಟಿತವಾಗುತ್ತಿರುವ ನಮ್ಮ ಸಮಾಜದಲ್ಲಿ ಶಾಸಕರು, ಸಚಿವರಿದ್ದಾರೆ. ನಮ್ಮ ಮಕ್ಕಳಿಗೆ ಉದ್ಯೋಗದಲ್ಲಿ ಅನ್ಯಾಯವಾಗುತ್ತಿದ್ದು, ಹೋರಾಟದ ಲಾಭ ಸಮಾಜದ ಪೀಳಿಗೆಗೆ ದೊರಕಬೇಕು. ಗುರುಗಳ ಹೋರಾಟ ಪಂಚಮಸಾಲಿಗಳಿಗೆ ಸೀಮಿತವಾಗದೆ ಅಖಂಡ ವೀರಶೈವ ಸಮಾಜದ ಹೋರಾಟವಾಗಬೇಕು. ಇಷ್ಟಲಿಂಗದ ಮೂಲಕ ಧರ್ಮಜಾಗೃತಿಯೊಂದಿಗೆ 2ಎ ಮೀಸಲಾತಿ ಹೋರಾಟ ಉತ್ತಮ ನಡೆ ಎಂದರು.
ಆಸಂಗಿಹಾಳದ ಶಂಕರಾನಂದ ಮಹಾರಾಜರು, ತಾಲೂಕು ಅಧ್ಯಕ್ಷ ಎಂ.ಎಂ.ಹಂಗರಗಿ, ಶಿವಾನಂದ ಮಂಗಾನವರ, ಗುತ್ತಿಗೆದಾರ ಸೋಮನಗೌಡ ಬಿರಾದಾರ ಇದ್ದರು. ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ, 2ಎ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಸೇರಿದಂತೆ ಸಮಾಜದ ವಿವಿಧ ವಿಭಾಗಗಳ ಮುಖಂಡರು, ತಾಲೂಕಿನ ವಿವಿಧ ಗ್ರಾಮಗಳ ಜನರಿದ್ದರು.