

ಬೇಲೂರು : ಜೈನರಗುತ್ತಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಮುನಿಸುವ್ರತ ತೀರ್ಥಂಕರರ 31 ಅಡಿ ಎತ್ತರದ ಪ್ರತಿಮೆ ಹಾಗೂ ಶೀತಲನಾಥ ತೀಥರ್ಂಕರರ ಪದ್ಮಾಸನ ಭಂಗಿಯ 24 ಅಡಿ ಎತ್ತರದ ಪ್ರತಿಮೆ ಸನ್ನಿಧಿಯಲ್ಲಿ ಬೃಹತ್ ಪಂಚಕಲ್ಯಾಣಕ ಪ್ರತಿಷ್ಠಾ ಮಹೋತ್ಸವ ನ. 29 ರಿಂದ ಡಿ. 4 ರವರೆಗೆ ವೈಭವದಿಂದ ನಡೆಯಲಿದೆ ಎಂದು ಜೈನರ ಗುತ್ತಿ ಶ್ರೀ ವೀರಸಾಗರ ಮುನಿ ಮಹಾರಾಜ್ ಹೇಳಿದರು.
4 ದಿನ ನಡೆಯಲಿರುವ ಪಂಚಕಲ್ಯಾಣ ಮಹೋತ್ಸವದ ಸಾನ್ನಿಧ್ಯವನ್ನು ತ್ರಯಾಚಾರ್ಯ ಚರ್ಯಾಶಿರೋಮಣಿ ಶ್ರೀ ಆಚಾರ್ಯ ವೀರ ಸಾಗರ ಮುನಿ ಮಹಾರಾಜ್ ಶ್ರೀ ಕುಲರತ್ನ ಭೂಷಣ ಮುನಿ, ಶ್ರೀ ಚಂದ್ರು ಪ್ರಭು ಮುನಿಗಳು ವಹಿಸಲಿದ್ದಾರೆ. 40 ಕ್ಕೂ ಹೆಚ್ಚು ದಿಗಂಬರ ಜೈನ ಮುನಿಗಳು ಭಾಗವಹಿಸಲಿದ್ದಾರೆ ಎಂದು ಅವರು ಮಾದಿಹಳ್ಳಿ ಹೋಬಳಿ ಜೈನರಗುತ್ತಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಶ್ರವಣಬೆಳಗೊಳದ ಬಾಹುಬಲಿ ಮಹಾ ಮಸ್ತಕಾಭಿಷೇಕದ ನಂತರ ಅತಿ ಹೆಚ್ಚು ಜೈನ ಮುನಿಗಳು ಸಮಾಗಮಗೊಳ್ಳಲಿರುವ ದೊಡ್ಡ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಜೈನ ಮಠದ ಭಟ್ಟಾರಕರು, ಕರ್ನಾಟಕ ಮತ್ತು ಉತ್ತರ ಭಾರತ ರಾಜ್ಯಗಳ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ ಎಂದರು.
ಕಳೆದ 10 ವರ್ಷದ ಹಿಂದೆ ಗ್ರಾಮಕ್ಕೆ ಆಗಮಿಸಿ ಸಮುದಾಯದ ಬಾಂಧವರನ್ನು ಒಗ್ಗೂಡಿಸಿ ಟ್ರಸ್ಟ್ ರಚನೆ ಮಾಡಿದ್ದೆವು. ಇದರ ಮೂಲಕ ಕ್ಷೇತ್ರದ ಅಭಿವೃದ್ಧಿ ಸಾಗುತ್ತಿದೆ ಎಂದು ಅವರು ಹೇಳಿದರು. ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಸ್ಥಾಪನೆ, ಆತ್ಮ ಸಾಧನೆ, ಧರ್ಮ ಸಾಧನೆ ಕೇಂದ್ರ, ಮುನಿಗಳಿಗಾಗಿತ್ಯಾಗಿ ಭವನ, ಗ್ರಂಥಾಲಯ, ಭಕ್ತರಿಗೆ ಯಾತ್ರಿ ನಿವಾಸ, ಭೋಜನಾಲಯ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ಶ್ರೀ ವೀರಸಾಗರ ಮುನಿ ಮಹಾರಾಜ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪಂಚಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಕುಣಿಗಲ್ ಬ್ರಹ್ಮದೇವಯ್ಯ, ಕೋಶಾಧ್ಯಕ್ಷ ಜಯೇಂದ್ರ ಕುಮಾರ್, ಸಹ ಕಾರ್ಯದರ್ಶಿಗಳಾದ ಬ್ರಹ್ಮೇಶ್, ನಾಗೇಂದ್ರ ಪ್ರಸಾದ್, ಸಂಚಾಲಕ ಧಾವನ್ ಜೈನ್ ಇತರರು ಇದ್ದರು.