

ಚನ್ನರಾಯಪಟ್ಟಣ: 2023ರ ವಿಧಾನಸಭಾ ಚುನಾವಣೆ ಗೆಲುವಿನ ಗುರಿಯೊಂದಿಗೆ ವಿಜಯಸಂಕಲ್ಪ ಅಭಿಯಾನದ ಹೆಸರಿನಲ್ಲಿ ಜ.29ರವರೆಗೆ ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರವಣಬೆಳಗೊಳ ಬಿಜೆಪಿ ಮಂಡಲದ ವಿಜಯಸಂಕಲ್ಪ ಅಭಿಯಾನದ ಜಿಲ್ಲಾ ಸಂಚಾಲಕ ಪ್ರಕಾಶ್ ತಿಳಿಸಿದರು.
ಜ.21ರಿಂದ ಕಾರ್ಯಕ್ರಮ ಪ್ರಾರಂಭವಾಗಿದ್ದು, ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯದ ಮನೆ, ಮನಗಳಿಗೆ ತಲುಪಿಸಲಾಗುತ್ತದೆ. ಅದಕ್ಕಾಗಿ ತಾಲೂಕು ಮಟ್ಟದಲ್ಲಿ 12 ಜನರ ತಂಡ ರಚಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರಪತ್ರ ಹಂಚುವಿಕೆ, ಪಕ್ಷದ ಕಾರ್ಯಕರ್ತರ ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸುವುದು, ಫಲಾನುಭವಿಗಳ ಸಂಪರ್ಕ, ಸದಸ್ಯತ್ವ ಅಭಿಯಾನ, ಗೋಡೆಬರಹ ಸೇರಿದಂತೆ ಜ.29 ರವರೆಗೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಡಿ.ಎಂ.ರವಿ ಮಾತನಾಡಿ, ಬೂತ್ ಮಟ್ಟದಲ್ಲಿ ಪಕ್ಷವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ವಿಜಯಸಂಕಲ್ಪ ಅಭಿಯಾನದಡಿ ಈಗಾಗಲೇ ಶ್ರವಣಬೆಳಗೊಳ ಮಂಡಲದ 277 ಬೂತ್‌ಗಳ ಪೈಕಿ 97ಬೂತ್‌ಗಳಲ್ಲಿ ಕಾರ್ಯಕ್ರಮ ಮುಗಿಸಿದ್ದು, ಉಳಿದ ಬೂತ್‌ಗಳಲ್ಲಿ ಮುಂದಿನ 9 ದಿನಗಳಲ್ಲಿ ಕಾರ್ಯಕ್ರಮ ಮುಗಿಸುವ ಗುರಿ ಹೊಂದಲಾಗಿದೆ. ಸದಸ್ಯತ್ವ ಅಭಿಯಾನದಡಿ ಈಗಾಗಲೇ ಮಂಡಲದ 17 ಸಾವಿರ ಜನರನ್ನು ನೋಂದಣಿ ಮಾಡಿದ್ದು, ಇದೀಗ ವಿಜಯಸಂಕಲ್ಪ ಅಭಿಯಾನದಡಿ 50 ಸಾವಿರ ಸದಸ್ಯತ್ವ ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೇಮಂತ್, ತಾಲೂಕು ಸಂಚಾಲಕ ಚಂದ್ರಶೇಖರ್, ಸದಸ್ಯರಾದ ಧರಣೀಶ್, ಜಗದೀಶ್ ಇತರರು ಇದ್ದರು.