

ಮೈಸೂರು: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಮೈಸೂರು ವಿವಿಯನ್ನು ಪ್ರತಿನಿಧಿಸಿದ್ದ ಹಳೆಯ ವಿದ್ಯಾರ್ಥಿ ಕ್ರೀಡಾಪಟುಗಳ ಸಂಸ್ಥೆ ವತಿಯಿಂದ ಎಂ.ವಿಜಯಕುಮಾರ್ ಸ್ಮಾರಕ ಬಾಲಕ, ಬಾಲಕಿಯರ ರಸ್ತೆ ಓಟ ಸ್ಪರ್ಧೆಯನ್ನು ಆ.29ರಂದು ಬೆಳಗ್ಗೆ 7ಕ್ಕೆ ಆಯೋಜಿಸಲಾಗಿದೆ.
ಮೂರು ವರ್ಷಗಳಿಂದ ಸಂಸ್ಥೆ ವತಿಯಿಂದ ಕೋವಿಡ್ ಕಾರಣ ಯಾವುದೇ ಕ್ರೀಡಾ ಚಟುವಟಿಕೆ ಆಯೋಜಿಸಿರಲಿಲ್ಲ. ಈ ಬಾರಿ ಆಯೋಜಿಸಿದ್ದು, ಹಳೇ ಡಿಸಿ ಕಚೇರಿ ಬಳಿ ಸ್ಪರ್ಧೆಗೆ ಚಾಲನೆ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಸಿ. ಕೃಷ್ಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲಿಗೆ ಬಾಲಕರಿಗೆ ಹಾಗೂ ನಂತರ ಬಾಲಕಿಯರಿಗೆ ಸ್ಪರ್ಧೆ ನಡೆಯಲಿದೆ. ಎಲ್ಲರಿಗೂ ಪ್ರವೇಶ ಉಚಿತವಾಗಿದ್ದು, ಭಾಗವಹಿಸಿದ ಪ್ರತಿಯೊಬ್ಬರಿಗೂ ಸೈಕಲ್ ಪ್ಯೂರ್ ಅಗರ್‌ಬತ್ತಿ ವತಿಯಿಂದ ಟೀ ಶರ್ಟ್ ವಿತರಿಸಲಾಗುವುದು. ಉಪಾಹಾರ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.
ಬಾಲಕರಿಗೆ ಮೂರು ಕಿ.ಮೀ, ಬಾಲಕಿಯರಿಗೆ ಎರಡು ಕಿ.ಮೀ ಓಟ ಸ್ಪರ್ಧೆ ಇರಲಿದ್ದು, ಮೊದಲ ಬಹುಮಾನವಾಗಿ ಆರು, 2ನೇ ಬಹುಮಾನವಾಗಿ ಐದು, 3ನೇ ಬಹುಮಾನವಾಗಿ ನಾಲ್ಕು, 4ನೇ ಬಹುಮಾನವಾಗಿ ಮೂರು, 5ನೇ ಬಹುಮಾನವಾಗಿ ಎರಡು ಹಾಗೂ 6ನೇ ಬಹುಮಾನವಾಗಿ ಒಂದು ಸಾವಿರ ರೂ., ಪದಕ, ಪ್ರಮಾಣಪತ್ರ ನೀಡಲಾಗುವುದು. ಓಟದಲ್ಲಿ 12ರಿಂದ 16 ವರ್ಷದ ಒಳಗಿನವರು ಪಾಲ್ಗೊಳ್ಳಬಹುದಾಗಿದೆ.
ಮಾಹಿತಿಗಾಗಿ ದೂ. 97318 08008, 98802 60510 ಸಂಪರ್ಕಿಸಬಹುದು ಎಂದು ವಿವರಿಸಿದರು. ಪದಾಧಿಕಾರಿಗಳಾದ ಎಂ.ಎ. ಚರಣ್, ಎಸ್.ಮಹದೇವ್, ನಟರಾಜ್, ಬಿ. ಶ್ರೀಕಾಂತ್ ಇದ್ದರು.