

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೆ.29ರ ಭಾನುವಾರ ರೈತರಿಗೆ ಸಂಬಂಧಿಸಿದ ಸಂವಾದ ಕಾರ್ಯಕ್ರಮ ಹಾಗೂ ‘ಡೈರೆಕ್ಟ್ ಆಕ್ಷನ್’ ಎಂಬ ಪ್ರೊ.ಎಂ ಡಿ ನಂಜುಂಡಸ್ವಾಮಿ ಹೋರಾಟದ ಕಥೆಯ ನಾಟಕವನ್ನು ಆಯೋಜನೆ ಮಾಡಲಾಗಿದೆ ಎಂದು ಪ್ರೊ.ಕೆ.ಸಿ.ಬಸವರಾಜು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಸಾಮೂಹಿಕ ನಾಯಕತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಸೆ.29ರ ಭಾನುವಾರ ಬೆಳಗ್ಗೆ 10 ಗಂಟೆಗೆ ಹಿರಿಯ ರೈತ ಹೋರಾಟಗಾರರು, ರೈತರು ಸೇರಿ ಸಂವಾದ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಸಂಜೆ 3ಕ್ಕೆ ನಗ್ನ ಥಿಯೇಟರ್ ಕಲಾವಿದರಿಂದ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೈತ ಸಾಲಗಾರನಲ್ಲ. ಸರ್ಕಾರವೇ ರೈತನ ಬಾಕಿದಾರ. ಭಾರತ ಎಂದರೆ ರೈತ, ರೈತ ಎಂದರೆ ಭಾರತ. ಆಹಾರ ಸಾರ್ವಭೌಮತ್ವ ಪ್ರತಿಯೊಬ್ಬ ಮನುಷ್ಯನ ಹಕ್ಕು ಎಂಬ ಸ್ಪಷ್ಟ ರೈತ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಆಚಾರ ವಿಚಾರಗಳನ್ನು ನಮ್ಮ ಸಂಘಟನೆ ಪ್ರಮುಖ ಅಜೆಂಡಗಳನ್ನಾಗಿ ಸ್ವೀಕರಿಸಿ, ಕ್ರಿಯಾಶೀಲಗೊಳ್ಳಬೇಕಾದ ಕಾಲದ ಕರೆ ಇಂದು ನಮ್ಮ ಮುಂದಿದೆ. ಹಾಗಾಗಿ ಪ್ರೊ. ನಂಜುಂಡಸ್ವಾಮಿ ಅವರ ಸ್ಪಷ್ಟ ವೈಚಾರಿಕ ನಿಲುವನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಕೃಷಿ ಕ್ಷೇತ್ರಕ್ಕೆ ಶಾಶ್ವತ ಪರಿಹಾರವನ್ನು ಹುಡುಕಲು ಅನ್ನದಾತರ ಹೋರಾಟಕ್ಕೆ ಜೊತೆಯಾಗುವ ಈ ನಾಟಕವನ್ನು ವೀಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ. ರವಿವರ್ಮ ಕುಮಾರ್, ಕೆ.ಟಿ.ಗಂಗಾಧರ್, ಚುಕ್ಕಿ ನಂಜುಂಡಸ್ವಾಮಿ, ಅನುಸೂಯಮ್ಮಾ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ್ ಇತರರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿ ಷಾಡ್ರಾಕ್, ರೈತ ಮುಖಂಡರಾದ ಕಣಗಾಲ್ ಮೂರ್ತಿ, ವಿಷ್ಣುಕುಮಾರ್, ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.