29ರಂದು ಆದಿಚುಂಚನಗಿರಿ ಮಠದಲ್ಲಿ ಕುವೆಂಪು ಜಯಂತ್ಯುತ್ಸವ

G.L. MUDHEGOWDA-
Published on

ಹಾಸನ: ಶ್ರೀ ಆದಿಚುಂಚನಗಿರಿ ಮಠದ ವತಿಯಿಂದ ಡಿಸೆಂಬರ್ 29ರ ಭಾನುವಾರ ಸಂಜೆ 5 ಗಂಟೆಗೆ ರಾಷ್ಟ್ರಕವಿ ಕುವೆಂಪು ಅವರ 120ನೇ ಜಯಂತಿ ಮತ್ತು ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಬಿಜಿಎಸ್ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ ತಿಳಿಸಿದರು.

ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀ ಆದಿಚುಂಚನಗಿರಿ ಮಠದ ಕಲ್ಯಾಣ ಮಂಟಪದಲ್ಲಿ ರಾಷ್ಟ್ರಕವಿ ಕುವೆಂಪು ಅವರ 120ನೇ ಜಯಂತ್ಯುತ್ಸವದ ಜತೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಐವರು ಗಣ್ಯರಿಗೆ ರಾಜ್ಯಮಟ್ಟದ ಬಿಜಿಎಸ್ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹಿರಿಯ ಸಾಹಿತಿ ಡಾ.ಹಂಪಾ ನಾಗರಾಜಯ್ಯ, ಖ್ಯಾತ ವಾಗ್ಮಿ ಪ್ರೊ. ಕೃಷ್ಣೇಗೌಡ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಹಿರಿಯ ಪತ್ರಕರ್ತರಾದ ಡಾ.ಟಿ.ಸಿ.ಪೂರ್ಣಿಮಾ, ಸುದರ್ಶನ್ ಚನ್ನಂಗಿಹಳ್ಳಿ ಅವರನ್ನು ಚೊಚ್ಚಲ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಶಸ್ತಿಯೂ 25 ಸಾವಿರ ನಗದು ಹಾಗೂ ಬೆಳ್ಳಿ ಫಲಕ ಒಳಗೊಂಡಿರುತ್ತದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ, ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮಾರಂಭ ನಡೆಯಲಿದೆ ಎಂದರು.

ಪ್ರಶಸ್ತಿ ಆಯ್ಕೆ ಸಮಿತಿ ಕಾರ್ಯದರ್ಶಿ ಡಾ.ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ಕುವೆಂಪು ಜಯಂತಿ ಅಂಗವಾಗಿ ಹೊಸ ಕೃತಿಗಳನ್ನು ಪ್ರಕಟ ಮಾಡಲು ನಿರ್ಧರಿಸಲಾಗಿತ್ತು. ಆದರೆ ಗುಣಮಟ್ಟದ ಕೃತಿಗಳು ಬಾರದ ಕಾರಣ, ರಾಜ್ಯಮಟ್ಟದ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು. ಈ ಬಾರಿಯ ಕುವೆಂಪು ಜಯಂತಿಯ ವಿಶೇಷ ಎಂದರೆ, ಈಗ ನಾಡಗೀತೆಯಾಗಿರುವ ಜೈ ಭಾರತ ಜನನಿಯ ತನುಜಾತೆ ಗೀತೆಯನ್ನು ಕುವೆಂಪು ಅವರು 1924 ರಲ್ಲಿ ರಚಿಸಿದರು. ಆಗ ಕುವೆಂಪು ಅವರಿಗೆ 20 ವರ್ಷದ ಪ್ರಾಯ. ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಪ್ರತಿಭೆ, ಅಗಾಧವಾದ ಪ್ರಬುದ್ಧತೆ ಇತ್ತು ಎಂಬುದಕ್ಕೆ ಈ ಗೀತೆ ಸಾಕ್ಷಿ. ಅದಕ್ಕೀಗ ಸಾರ್ಥಕ 100 ವರ್ಷ ತುಂಬಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಎಚ್.ಬಿ. ಮದನಗೌಡ, ಬಿ.ಆರ್. ಬೊಮ್ಮೇಗೌಡ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net