

ಗುರ್ಲಾಪುರ (ಬೆಳಗಾವಿ): ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಟನ್ ಕಬ್ಬಿಗೆ ನ್ಯಾಯ ಸಮ್ಮತ ಮತ್ತು ಮೌಲ್ಯಾಧಾರಿತ (ಎಫ್‌ಆರ್‌ಪಿ) ಕನಿಷ್ಠ 3,500 ರೂ. ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾದ್ಯಂತ ನಡೆಯುತ್ತಿರುವ 8ನೇ ದಿನದ ಅಹೋರಾತ್ರಿ ಧರಣಿಗೆ ಗುರುವಾರ ವಿವಿಧ ಮಠಾಧೀಶರು, ಕನ್ನಡ, ಕಾರ್ಮಿಕ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಮತ್ತೊಂದೆಡೆ ರಾಜ್ಯ ಸರ್ಕಾರದ ನಿರ್ಲಕ್ಷೃ ಧೋರಣೆ ಖಂಡಿಸಿ ಅರಬೆತ್ತಲೆ ಪ್ರತಿಭಟನಾ ರ‌್ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರು ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ಹೆದ್ದಾರಿ ಸಂಚಾರ ತಡೆದು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು, ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಗುರುವಾರ ಭಾಗವಹಿಸಿ ಹೋರಾಟಕ್ಕೆ ಸಾಥ್ ನೀಡಿದರು. ಅಲ್ಲದೆ, 200ಕ್ಕೂ ಹೆಚ್ಚು ಹಳ್ಳಿಯ ಸಾವಿರಾರು ಮಹಿಳೆಯರು ತಲೆ ಮೇಲೆ ಬುತ್ತಿಗಂಟು ಹೊತ್ತುಕೊಂಡು ಭಾಗವಹಿಸಿದ್ದು, ಹೋರಾಟಕ್ಕೆ ಮತ್ತಷ್ಟು ಬಲಬಂದತಾಗಿದೆ.
ಬೆಳಗಾವಿ ಜಿಲ್ಲೆಯ ರಾಜ್ಯ, ಜಿಲ್ಲಾ ಹಾಗೂ ತಾಲೂಕು ರಸ್ತೆ ಸಂಚಾರ ಬಂದ್ ಮಾಡಿ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು. ಇದರಿಂದಾಗಿ ಜನರು ಸಮಸ್ಯೆ ಎದುರಿಸಿದರು. ಹಾವೇರಿ, ಕಲಬುರಗಿ, ದಾವಣಗೆರೆ, ಗದಗ, ಚಿತ್ರದುರ್ಗ ಸೇರಿ ವಿವಿಧ ಜಿಲ್ಲೆಗಳ ಸಾವಿರಾರು ರೈತರು ಗುರ್ಲಾಪುರಕ್ಕೆ ಆಗಮಿಸಿ ಪ್ರತಿಭಟನೆಗೆ ಬೆಂಬಲ ನೀಡಿದರು.
ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 79 ಸಕ್ಕರೆ ಕಾರ್ಖಾನೆ ಕಬ್ಬಿನ ಇಳುವರಿ, ಕಬ್ಬು ಕಟಾವು ಮತ್ತು ಸಾಗಣೆ ಹಾಗೂ ನ್ಯಾಯಸಮ್ಮತ ಮತ್ತು ಮೌಲ್ಯಾಧಾರಿತ ದರ ಅಧಿಕೃತವಾಗಿ ಪ್ರಕಟಿಸುತ್ತಿಲ್ಲ. ರೈತರಿಗೆ ವಂಚನೆ ಮಾಡುತ್ತಿರುವ ಕಾರ್ಖಾನೆಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಪ್ರತಿವರ್ಷ ಎಲ್ಲ ವಸ್ತುಗಳು, ಕೃಷಿ ಸಲಕರಣೆಗಳ ಬೆಲೆ ಏರಿಕೆಯಾಗುತ್ತಿದ್ದರೂ ರೈತರ ಬೆಳೆಗೆ ಉತ್ತಮ ದರ ಸಿಗುತ್ತಿಲ್ಲ. ರಾಜಕಾರಣಿಗಳಿಗೆ ರಾತ್ರೋರಾತ್ರಿ ಕೋರ್ಟ್ ತೆರೆದು ಕೇಸ್ ನಡೆಸಿ ನ್ಯಾಯ ಒದಗಿಸುತ್ತೀರಿ. ಆದರೆ ಹೋರಾಟ ಮಾಡುತ್ತಿರುವ ರೈತರಿಗೆ ನ್ಯಾಯ ಕೊಡಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ದುಡಿದರೂ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಿಲ್ಲ. ಸೂಕ್ತ ದರ ಸಿಗದೆ ರೈತ ಸಾಲದ ಸುಳಿಗೆ ಸಿಗುವಂತಾಗಿದೆ. ಕೂಡಲೇ ಸರ್ಕಾರ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿ, ಕಬ್ಬು ದರ ನಿಗದಿ ಮಾಡಬೇಕು ಎಂದರು. ಹೊಸ ಯರಗುದ್ರಿಯ ಸಿದ್ದಪ್ರಭು ಶಿವಾಚಾರ್ಯ ಸ್ವಾಮೀಜಿ, ಮಣ್ಣಿಕೇರಿಯ ವಿಜಯಮಹಾಂತ ಶ್ರೀಗಳು, ಶಿರೋಳದ ಶಂಕರಾರೂಢ ಸ್ವಾಮೀಜಿ, ಹಡಗಿನಾಳದ ಮುತ್ತೇಶ್ವರ ಶ್ರೀಗಳು, ಬೆಳಗಲಿಯ ಸದಾಶಿವ ಗುರೂಜಿ, ನಿಪ್ಪಾಣಿಯ ಪ್ರಾಣಲಿಂಗೇಶ್ವರ ಸ್ವಾಮೀಜಿ, ಹುಬ್ಬಳ್ಳಿಯ ಶಿವ ಶಂಕರಾಚಾರ್ಯ ಸ್ವಾಮೀಜಿ ಪರಸಾನಂದ ಸ್ವಾಮೀಜಿ ಇತರರಿದ್ದರು.