ದಾವಣಗೆರೆ ಜಿಲ್ಲೆಯ 292 ಹಳ್ಳಿಗಿಲ್ಲ ಕೆಎಸ್ಸಾರ್ಟಿಸಿ ಬಸ್ ಭಾಗ್ಯ!

KSRTC bus
Published on

ಡಿ.ಎಂ. ಮಹೇಶ್, ದಾವಣಗೆರೆ: ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳಿಗೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಆನೆಬಲ ತಂದಿದೆ. ಆದರೆ, ದಾವಣಗೆರೆ ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಕಾಲಿಡದ 292 ಹಳ್ಳಿಗಳಿವೆ ಎಂಬ ವೈರುಧ್ಯವೂ ಇದೆ.

ಜಿಲ್ಲೆಯಲ್ಲಿ ಒಟ್ಟು 845 ಗ್ರಾಮಗಳಿವೆ. ಇದರಲ್ಲಿ 553 ಕಡೆ ರಾಜ್ಯ ಸಾರಿಗೆ ಬಸ್‌ಗಳು ಓಡಾಡುತ್ತಿವೆ. 292 ಹಳ್ಳಿಗಳ ಜನರಿಗೆ ಕೆಂಪು ಬಸ್ ಮರೀಚಿಕೆಯಾಗಿವೆ! ಇದರಲ್ಲಿ ಸುಮಾರು 120 ಗ್ರಾಮಗಳಿಗೆ ಖಾಸಗಿ ಬಸ್‌ಗಳ ದರ್ಶನ ಭಾಗ್ಯವೂ ಇಲ್ಲ!!

ಚನ್ನಗಿರಿ, ಜಗಳೂರು ಎರಡೂ ಕೂಡ ರಾಜ್ಯ ಸಾರಿಗೆ ಬಸ್‌ಗಳ ಹೆಚ್ಚು ಕಾರ್ಯಾಚರಣೆ ಇಲ್ಲದ ನತದೃಷ್ಟ ತಾಲೂಕುಗಳು ಎನ್ನಲಡ್ಡಿಯಿಲ್ಲ. ಚನ್ನಗಿರಿ ತಾಲೂಕಿನ 250 ಹಳ್ಳಿಗಳಲ್ಲಿ 95ರಲ್ಲಿ ಮಾತ್ರ ಕೆಎಸ್ಸಾರ್ಟಿಸಿ ಸೇವೆ ಇದೆ. 155 ಹಳ್ಳಿಗಳಲ್ಲಿಲ್ಲ. ಹಿಂದುಳಿದ ಜಗಳೂರು ತಾಲೂಕಿನಲ್ಲಿ 190 ಗ್ರಾಮಗಳಿದ್ದು 115ರಲ್ಲಿ ಕೆಂಪು ಬಸ್ಸುಗಳು ಓಡಾಡಿದರೆ 75 ಹಳ್ಳಿಗಳಿಗಿನ್ನೂ ಕಾಲಿಟ್ಟಿಲ್ಲ!

ರಾಜ್ಯ ಸಾರಿಗೆ ಸಂಸ್ಥೆಯ ದಾವಣಗೆರೆ ವಿಭಾಗ ಆರಂಭವಾಗಿ 3 ದಶಕ ಕಳೆದಿದ್ದು, ಜಿಲ್ಲಾದ್ಯಂತ 365 ಕೆಎಸ್ಸಾರ್ಟಿಸಿ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಇದರಲ್ಲಿ ಸಾಮಾನ್ಯ, ನಗರ ಸಾರಿಗೆ, ವೇಗದೂತ ಸೇರಿ 306 ಬಸ್‌ಗಳಿವೆ. ಉಳಿದಂತೆ 12 ಎಲೆಕ್ಟ್ರಿಕ್, 12 ವೋಲ್ವೋ, 29 ರಾಜಹಂಸ, 6 ಹವಾನಿಯಂತ್ರಣವಲ್ಲದ ಬಸ್‌ಗಳಿವೆ. ಆದರೆ ಗ್ರಾಮೀಣ ಭಾಗದ ಬೇಡಿಕೆ ಮಾತ್ರ ತಣಿದಿಲ್ಲ.

120 ಕಡೆ ಆಟೊ, ಕ್ರೂಸರ್‌ಗಳೇ ಗತಿ!: ಜಗಳೂರು ತಾಲೂಕಿನ ಜಮ್ಮಾಪುರ, ಅಗಸನಹಳ್ಳಿ, ಕೆಳಗೋಟೆ, ಹಿರೇಬನ್ನಿಹಟ್ಟಿ, ಚಿಕ್ಕಬನ್ನಿಹಟ್ಟಿ, ಐನಹಳ್ಳಿ, ಮಾದಮುತ್ತೇನಹಳ್ಳಿ, ಬಿದರಕೆರೆ ಗೊಲ್ಲರಹಟ್ಟಿ, ಕಟ್ಟಿಗೆಹಳ್ಳಿ, ಗುಡ್ಡದಲಿಂಗನಹಳ್ಳಿ, ಮೆದಗಿನಕೆರೆ ಸೇರಿ ಸುಮಾರು 50 ಗ್ರಾಮಗಳಲ್ಲಿ ಕೆಎಸ್ಸಾರ್ಟಿಸಿ- ಖಾಸಗಿ ಬಸ್ ಎರಡರ ಸೌಲಭ್ಯವೂ ಇಲ್ಲ.

ಅಲ್ಲಿನವರು ಬೈಕ್, ಆಟೊ, ಆಪೆ ಆಟೊ, ಕ್ರೂಸರ್, ಬುಲೆರೋ ಇತ್ಯಾದಿ ವಾಹನಗಳನ್ನು ನೆಚ್ಚಿದ್ದಾರೆ. ಶಕ್ತಿ ಯೋಜನೆಯಡಿ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು, ಕೂಲಿಕಾರರಿಗೆ ಸೌಲಭ್ಯ ದೊರಕಿಲ್ಲ ಎಂಬ ದೂರಿದೆ.

ಚನ್ನಗಿರಿ ತಾಲೂಕಿನ ಗಾಂಧಿನಗರ, ಹಿರೇಮಳಲಿ, ಮೆಳ್ಳನಾಯ್ಕನಕಟ್ಟೆ, ಸಾರಥಿ, ಹೊಸೂರು ಸೇರಿ ಸುಮಾರು 70 ಗ್ರಾಮಗಳಲ್ಲಿ ಇದೇ ಸ್ಥಿತಿ!. ಸ್ವಾತಂತ್ರೃ ಸಿಕ್ಕಾಗಿನಿಂದ ಸರ್ಕಾರಿ ಬಸ್ ಕಾಣದಿದ್ದ ಹೊನ್ನಾಯ್ಕನಹಳ್ಳಿ ಹಾಗೂ ಕೊರಟಿಕೆರೆ ಗ್ರಾಮಗಳಿಗೆ ಇತ್ತೀಚೆಗೆ ದರ್ಶನವಾಗಿದೆ ಎನ್ನಲಾಗಿದೆ.

ಮುಜರಾಯಿ ಇಲಾಖೆಗೆ ಒಳಪಡುವ, ಜೋಳದಾಳ್ ಗ್ರಾಪಂ ವ್ಯಾಪ್ತಿಯ ಅಮ್ಮನಗುಡ್ಡದ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನಕ್ಕೆ ಹೋಗಿಬರಲು ಬಸ್‌ಗಳ ಲಭ್ಯತೆ ಇಲ್ಲ. ಪ್ರತಿ ಮಂಗಳವಾರ-ಶುಕ್ರವಾರ ಅಲ್ಲಿಗೆ ತೆರಳುವ ಭಕ್ತರ ದಂಡು ಇತರೆ ವಾಹನಗಳನ್ನೇ ಅವಲಂಬಿಸಬೇಕು. ರಾಜಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಮಾವಿನಹೊಳೆ ಗ್ರಾಮದ ಮಹಾರುದ್ರಸ್ವಾಮಿ ದೇವಸ್ಥಾನಕ್ಕೆ ಶಿವರಾತ್ರಿಗೊಮ್ಮೆ ಖಾಸಗಿ ಬಸ್ ಸೇವೆ ಲಭ್ಯವುಂಟು!

ಕಾಮಗಾರಿಗಳ ನಿರೀಕ್ಷೆ: ಕೆಎಸ್ಸಾರ್ಟಿಸಿ ಡಿಪೊ ನಿರ್ಮಾಣಕ್ಕಾಗಿ ಜಗಳೂರು ತಾಲೂಕಿನಲ್ಲಿ ದಶಕದ ಹೋರಾಟ ನಡೆದಿದ್ದರೂ ಚಾಲನೆ ದೊರೆತಿಲ್ಲ. ಗೊಲ್ಲರಹಟ್ಟಿಯಲ್ಲಿ 4 ಎಕರೆ ಜಾಗ ಕೆಎಸ್ಸಾರ್ಟಿಸಿಗೆ ಹಸ್ತಾಂತರವಾಗಿದ್ದರೂ ಉದ್ದೇಶಿತ 8 ಕೋಟಿ ರೂ. ಅನುದಾನ ಕೊರತೆಯಿಂದಾಗಿ ಡಿಪೊ ನಿರ್ಮಾಣ ನನೆಗುದಿಯಲ್ಲಿದೆ.

ಇನ್ನು ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯಲ್ಲೂ ಪ್ರತ್ಯೇಕ ಡಿಪೊ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಸರ್ಕಾರದ ನೇರ ಅನುದಾನ ಇಲ್ಲದಿದ್ದರೂ ನಿಗಮದ ಸಂಪನ್ಮೂಲದಿಂದಲೇ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಕೆಲಸ ನಡೆಯುತ್ತಿದೆ. 2024ರ ಜನವರಿ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕರೊನಾ ಸಂದರ್ಭದಲ್ಲೇ ಹೊಸ ಬಸ್‌ಗಳ ಖರೀದಿ ಆಗಬೇಕಿತ್ತು, ಸಾಧ್ಯವಾಗಿಲ್ಲ. ಸಂಪನ್ಮೂಲ ಕೊರತೆ ಇದೆ. ಜಿಲ್ಲೆಗೆ 30 ಬಸ್‌ಗಳ ಅಗತ್ಯವಿದ್ದು ಸದ್ಯಕ್ಕೆ ಇರುವುದರಲ್ಲೇ ನಿರ್ವಹಣೆ ಮಾಡಲಾಗುತ್ತಿದೆ. ಹೊಸ ಡಿಪೋಗಳು ಆರಂಭವಾದಲ್ಲಿ ತಲಾ ಕನಿಷ್ಠ 30 ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ಆಗ ಗ್ರಾಮಾಂತರ ಭಾಗಗಳಿಗೂ ಸೇವೆ ಸಿಗಲಿವೆ.
l ಹೆಸರು ಬಹಿರಂಗ ಪಡಿಸಲಿಚ್ಛಿಸದ ಸಿಬ್ಬಂದಿ.

ಜಗಳೂರು ತಾಲೂಕಿನಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳ ಸಮಸ್ಯೆ ಇದೆ. ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವ್ಯವಸ್ಥೆ ಇದ್ದರೂ ಅನುಕೂಲ ಆಗುತ್ತಿಲ್ಲ. ಆಸ್ಪತ್ರೆ ಮತ್ತು ಇತರೆ ಅಗತ್ಯ ಕಾರ್ಯಕ್ಕೆ ಹೋಗುವವರಿಗೆ ತೊಂದರೆಯಾಗಿದೆ. ಅನೇಕ ಹೋರಾಟ ರೂಪಿಸಿದ್ದರೂ ಲಾಭವಾಗಿಲ್ಲ.

l ಸಿ.ಎಂ. ಹೊಳೆ ಮಹಾಲಿಂಗಪ್ಪ
ಕರುನಾಡ ನವನಿರ್ಮಾಣ ಸೇನೆ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net