

ವಿಶೇಷ ವರದಿ ತುಮಕೂರು
ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ (ಪಿಎಂಜೆಯುಜಿಎ) ಯೋಜನೆಯಡಿ ಅಭಿವೃದ್ಧಿಪಡಿಸಲು ಪರಿಶಿಷ್ಟ ಪಂಗಡದ ಜನಾಂಗದವರು ಹೆಚ್ಚಾಗಿರುವ ಜಿಲ್ಲೆಯ ತುಮಕೂರು, ಕೊರಟಗೆರೆ, ಸಿರಾ, ಪಾವಗಡ, ಮಧುಗಿರಿ, ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯ 29 ಗ್ರಾಮ ಆಯ್ಕೆ ಮಾಡಲಾಗಿದೆ. ಗ್ರಾಮದ ಒಟ್ಟು ಜನಸಂಖ್ಯೆಯಲ್ಲಿ ಶೇ.50ರಷ್ಟು ಪರಿಶಿಷ್ಟ ಪಂಗಡ ಸಮುದಾಯದ ಜನರು ವಾಸಿಸುವ ಗ್ರಾಮಗಳನ್ನು ಯೋಜನೆಗೆ ಆಯ್ಕೆಮಾಡಲಾಗಿದೆ. 2011ರ ಜನಗಣತಿ ಆಧಾರದ ಮೇಲೆ ಗ್ರಾಮಗಳನ್ನು ಗುರುತಿಸಲಾಗಿದೆಯಾದರೂ ಇತ್ತೀಚೆಗೆ ಕೇಂದ್ರ ಸರ್ಕಾರ ಸರ್ಕಾರೇತರ ಸಂಸ್ಥೆ ಯಿಂದಲೂ ಸಮೀೆ ನಡೆಸಿ ವರದಿ ಪಡೆದು ಕಾರ್ಯಕ್ರಮ ರೂಪಿಸಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀಸಲಿರಿಸಿದ 79,156 ಕೋಟಿ ರೂ. ಅನುದಾನದಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ದೇಶದ 63,000 ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ.
ಕೇಂದ್ರ ಬುಡಕಟ್ಟು ಮಂತ್ರಾಲಯ ಈ ಯೋಜನೆ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊತ್ತಿದೆ. ದೇಶದ ಸುಮಾರು 5 ಕೋಟಿ ಜನರಿಗೆ ಯೋಜನೆಯಿಂದ ಅನುಕೂಲವಾಗಲಿದೆ. 2024&-25ರಿಂದ 2028-&29ನೇ ಸಾಲಿನವರೆಗೆ 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು. 2024&-25ರಿಂದ 2025-&26ನೇ ಸಾಲಿಗೆ ಮೊದಲ ಹಂತದಲ್ಲಿ 4000 ಕೋಟಿ ರೂ. ಅನುದಾನವನ್ನು ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನದಡಿ ನಿಗದಿ ಮಾಡಲಾಗಿದೆ. ಈ ಅಭಿಯಾನದಡಿ ತುಮಕೂರು ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗದ ಜನಾಂಗದವರು ಹೆಚ್ಚಾಗಿರುವ 29 ಗ್ರಾಮಗಳನ್ನು ಆಯ್ಕೆ ಮಾಡಿ ಭೌತಿಕ ಗುರಿ ನಿಗದಿಪಡಿಸಲಾಗಿದ್ದು, ವಿವಿಧ 17 ಇಲಾಖೆಗಳು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಿವೆ.
29 ಗ್ರಾಮಗಳು ಯಾವವು?
ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡಹುಲ್ಲೇನಹಳ್ಳಿ, ಮಾದಾಪುರ, ಹಂದಿಗನಡು, ಜಾಣೇಹಾರ್. ಪಾವಗಡ ತಾಲೂಕಿನ ದಳವಾಯಿಹಳ್ಳಿ, ಹೊಸದುರ್ಗ, ಹನಮೇನಬೆಟ್ಟ (ಕೆ.ರಾಮ್ ಪುರ), ರಂಗಸಮುದ್ರ, ಹನಮಂತನಹಳ್ಳಿ, ಹೊಟ್ಟೆಬೊಮ್ಮನಹಳ್ಳಿ, ಬೆಳ್ಳಿಬಟ್ಟಲು. ತುಮಕೂರು ತಾಲೂಕಿನ ಲಿಂಗೇನಹಳ್ಳಿ, ದೊಡ್ಡವಿರನಹಳ್ಳಿ, ಕುಪ್ಪೂರು. ಶಿರಾ ತಾಲೂಕಿನ ಕುಂಬಾರಹಳ್ಳಿ, ಮಾರಗೊಂಡನಹಳ್ಳಿ, ಬಟ್ಟಿಗನಹಳ್ಳಿ, ಸಿಡ್ಲೇಕೋಣ, ಜೋಡಿದೇವರಹಳ್ಳಿ, ಸಲುಪರಹಳ್ಳಿ. ಮಧುಗಿರಿ ತಾಲೂಕಿನ ಬಸವನಹಳ್ಳಿ, ವಿಠಲಾಪುರ, ಗುಟ್ಟೆ, ಮುತ್ಯಾಲಮ್ಮನಹಳ್ಳಿ. ಗುಬ್ಬಿ ತಾಲೂಕಿನ ಉಂಗನಾಳ, ಕಲ್ಲುಗುಡಿ, ಜಲಗುಣಿ, ಸಾಗಸಂದ್ರ ಹಾಗೂ ಕೊರಟಗೆರೆ ತಾಲೂಕಿನ ಹಂಚಿಹಳ್ಳಿ ಗ್ರಾಮಗಳಲ್ಲಿ ಪರಿಶಿಷ್ಟ ಸಮುದಾಯದ ಜನಸಂಖ್ಯೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗಿದ್ದು ಅಗತ್ಯ ಮೂಲಸೌಕರ್ಯದ ಕನಸಿದೆ.
ಮೂಲಸೌಕರ್ಯ ಅಭಿವೃದ್ಧಿ ಸಾಮೂಹಿಕ ಹೊಣೆ
ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪಕ್ಕಾ ಮನೆ, ಸಂಪರ್ಕ ರಸ್ತೆಗಳು, ಗ್ರಾಮೀಣ ನೀರು ಸರಬರಾಜು ಇಲಾಖೆ ಜೆಜೆಎಂ, ವಿದ್ಯುತ್ ಇಲಾಖೆ ಮನೆಗಳ ವಿದ್ಯುದಿಕರಣ (ಆರ್ಡಿಎಸ್ಎಸ್), ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಆಫ್-ಗ್ರಿಡ್ ಸೌರ, ಹೊಸ ಸೌರ ವಿದ್ಯುತ್ ಯೋಜನೆ, ಆರೋಗ್ಯ ಇಲಾಖೆ ಸಂಚಾರಿ ವೈದ್ಯಕಿಯ ಘಟಕಗಳು, ರಾಷ್ಟ್ರೀಯ ಆರೋಗ್ಯ ಮಿಷನ್, ಆಯುಷ್ಮಾನ್ ಕಾರ್ಡ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಎಲ್ಪಿಜಿ ಪಿಎಂ ಉಜ್ಜಲ ಯೋಜನೆಯಡಿ ಸಂಪರ್ಕಗಳು, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಪೋಷಣ್ ಅಭಿಯಾನ್, ಶಿಕ್ಷಣ ಇಲಾಖೆ ವಿದ್ಯಾರ್ಥಿನಿಲಯಗಳ ನಿಮಾರ್ಣ, ಆಯುಷ್ ಇಲಾಖೆಯಿಂದ ಪೋಷಣ್ ವಾಟಿಕಾಸ್, ಟೆಲಿಕಾಂ ಇಲಾಖೆಯಿಂದ ಯುನಿವರ್ಸಲ್ ಸೇವೆ, ಕೌಶಾಲಾಭಿವೃದ್ಧಿ ಇಲಾಖೆ ಸ್ಕಿಲ್ ಇಂಡಿಯಾ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಇಲಾಖೆ ಡಿಜಿಟಲ್ ಇನಿಶೀಯೇಟಿವ್ಸ್, ಕೃಷಿ ಇಲಾಖೆ ಸುಸ್ಥಿರ ಕೃಷಿ ಉತ್ತೇಜನ, ಮೀನುಗಾರಿಕೆ ಇಲಾಖೆ ಮೀನು ಸಂಸತಿ ಬೆಂಬಲ, ಪಶುಸಂಗೋಪನೆ ಇಲಾಖೆ ಜಾನುವಾರು ಪಾಲನೆ, ಪಂಚಾಯತ್ ರಾಜ್ ಇಲಾಖೆ ಸಾಮರ್ಥ್ಯ ಕಟ್ಟಡ, ಪ್ರವಾಸೋದ್ಯಮ ಇಲಾಖೆ ಟ್ರೆೃಬಲ್ ಹೋಂ ಸ್ಟೇಸ್, ಸ್ವದೇಶ ದರ್ಶನ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಪ್ರಧಾನಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ ಅನುಷ್ಠಾನಗೊಳ್ಳಲಿವೆ.
ಏನೇನು ಬರಲಿವೆ?
ಅಭಿಯಾನದಡಿ ಜಿಲ್ಲೆಯಲ್ಲಿ 100 ಬುಡಕಟ್ಟು ಬಹು ಉಪಯೋಗಿ ಮಾರ್ಕೆಟಿಂಗ್ ಕೇಂದ್ರಗಳು, ಆಶ್ರಮ ಶಾಲೆಗಳು, ವಿದ್ಯಾರ್ಥಿನಿಲಯಗಳು, ಸರ್ಕಾರಿ ಅಥವಾ ರಾಜ್ಯ ಬುಡಕಟ್ಟು ವಸತಿ ಶಾಲೆಗಳ ಮೂಲ ಸೌಕರ್ಯಗಳನ್ನು ಸುಧಾರಿಸುವುದು, ಕೌನ್ಸೆಲಿಂಗ್ ಬೆಂಬಲ, ಅರಣ್ಯ ಹಕ್ಕು ಕಾಯ್ದೆ- 2006 ಮತ್ತು ಸಮುದಾಯ ಅರಣ್ಯ ಹಕ್ಕು ನಿರ್ವಹಣೆ ಮಧ್ಯಸ್ಥಿಕೆಗಳಿಗೆ ಬೆಂಬಲ, ಯೋಜನಾ ನಿರ್ವಹಣಾ ನಿಧಿಗಳು, ಉತ್ಪನ್ನ ಪ್ರದರ್ಶನ ನೀಡುವ ಬುಡಕಟ್ಟು ಜಿಲ್ಲೆಗಳಿಗೆ ಪ್ರೋತ್ಸಾಹ ನೀಡಲು ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ.
ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ ಯೋಜನೆಯಡಿ ಜಿಲ್ಲೆಯ ತುಮಕೂರು, ಕೊರಟಗೆರೆ, ಸಿರಾ, ಪಾವಗಡ, ಮಧುಗಿರಿ, ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲೂಕುಗಳ ವ್ಯಾಪ್ತಿಗೆ ಒಳಪಟ್ಟ 29 ಗ್ರಾಮಗಳ ಎಲ್ಲ ಬುಡಕಟ್ಟು ಜನಾಂಗದವರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.| ಶುಭಕಲ್ಯಾಣ್, ಜಿಲ್ಲಾಧಿಕಾರಿ ತುಮಕೂರು