ತಾಯೂರಿನಲ್ಲಿ 29 ಬೆಳ್ಳಿ ನಾಣ್ಯಗಳು ಪತ್ತೆ

06-10-24 njd news,01 ,ph,2
ನಂಜನಗೂಡು ತಾಲೂಕಿನ ತಾಯೂರು ಗ್ರಾಮದ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನದಲ್ಲಿ ಪತ್ತೆಯಾದ ಬೆಳ್ಳಿ ನಾಣ್ಯ.
Published on

ನಂಜನಗೂಡು: ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿರುವ ತಾಯೂರು ಗ್ರಾಮದ ಶ್ರೀ ಲಕ್ಷ್ಮಿ ವರದರಾಜ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ವೇಳೆ 29 ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ.

ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ದೇವಸ್ಥಾನವಾಗಿದ್ದು, ಶಿಥಿಲವಾಗಿದ್ದ ಕಾರಣ ಜಿರ್ಣೋದ್ಧಾರ ಕಾಮಗಾರಿಯನ್ನು ನಡೆಸಲಾಗುತ್ತಿತ್ತು. ಶನಿವಾರ ದೇವಸ್ಥಾನದ ಗರ್ಭಗುಡಿಯನ್ನು ಕೆಡುವುತ್ತಿದ್ದ ಸಂದರ್ಭದಲ್ಲಿ ನಾಲ್ಕು ಬೆಳ್ಳಿ ನಾಣ್ಯಗಳು ಕಂಡು ಬಂದಿವೆ. ತಕ್ಷಣವೇ ಗುತ್ತಿಗೆದಾರ ಸಿದ್ದರಾಜು ಮತ್ತು ಗ್ರಾಮದ ಮುಖಂಡರು ನಾಣ್ಯಗಳನ್ನು ಪರಿಶೀಲಿಸಿ, ಬಿಳಿಗೆರೆ ಪೊಲೀಸ್ ಠಾಣೆ ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ದೇಗುಲದ ಆವರಣದಲ್ಲಿ ಹುಡುಕಾಟ ನಡೆಸಿದಾಗ ಮೊದಲು ದೊರೆತಿದ್ದ ನಾಲ್ಕು ನಾಣ್ಯಗಳು ಸೇರಿದಂತೆ ಮಣ್ಣಿನಲ್ಲಿದ್ದ ಒಟ್ಟು 29 ನಾಣ್ಯಗಳನ್ನು ಹೊರ ತೆಗೆದಿದ್ದಾರೆ. 18ನೇ ಶತಮಾನದ ಬೆಳ್ಳಿ ನಾಣ್ಯಗಳು ಎಂದು ಹೇಳಲಾಗುತ್ತಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಾಣ್ಯದ ಒಂದು ಭಾಗದಲ್ಲಿ ಇಂಗ್ಲೆಂಡಿನ ವಿಕ್ಟೋರಿಯಾ ಮಹಾರಾಣಿ ಭಾವಚಿತ್ರ ಇದೆ. ಸುಮಾರು 800 ವರ್ಷಗಳ ಇತಿಹಾಸವಿರುವ ದೇವಸ್ಥಾನ ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಸಲಾಗುತ್ತಿದೆ. ಮತ್ತಷ್ಟು ನಾಣ್ಯಗಳ ಶೋಧ ಕಾರ್ಯ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net