ಸಾಂಕ್ರಾಮಿಕ ರೋಗ ಭೀತಿ: ನಗರಸಭೆ ವ್ಯಾಪ್ತಿಯ ತಗ್ಗುಪ್ರದೇಶಗಳಾದ ಕಲ್ಸಂಕ, ಬೈಲಕೆರೆ, ಬನ್ನಂಜೆ, ಕೊಡಂಕೂರು, ಕೊಡವೂರು ಭಾಗಗಳಲ್ಲಿ ಹಲವು ಮನೆಗಳಿಗೆ, ಅಂಗಡಿಗಳಿಗೆ ನೆರೆಯ ನೀರು ನುಗ್ಗಿದೆ. ಬ್ರಹ್ಮಾವರ, ಕಾಪು ಮತ್ತು ಕಾರ್ಕಳ ತಾಲೂಕುಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು, ನೆರೆ ತಗ್ಗಿದರೂ ಈ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ರೋಗ ತಡೆ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ನೆರೆಪೀಡಿತ ಪ್ರದೇಶಗಳ ಸಮೀಕ್ಷೆಗೆ ಮುಂದಾಗಿದೆ. ಈ ಬಗ್ಗೆ ‘ವಿಜಯವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ನೀರು ನಿಂತ ಕಡೆಗಳಲ್ಲಿ ರಾಸಾಯನಿಕ ಸಿಂಪಡಣೆ ಹಾಗೂ ನೆರೆಯಿಂದ ಕಲುಷಿತವಾಗಿರುವ ಬಾವಿ ನೀರು ಕುಡಿಯದಂತೆ ಆರೋಗ್ಯ ಕಾರ್ಯಕರ್ತೆಯರ ಮೂಲಕ ಸಾರ್ವಜನಿಕರಲ್ಲಿ ವಿನಂತಿ ಮಾಡಲಾಗಿದೆ. ಬಾವಿ ನೀರು ಸ್ವಚ್ಛಗೊಳಿಸಲು ಸೂಚಿಸಲಾಗಿದೆ. ಮಳೆ ಮತ್ತು ಬಿಸಿಲು ಮಿಶ್ರಿತ ವಾತಾವರಣದಿಂದ ಡೆಂೆ, ಮಲೇರಿಯಾ, ಚಿಕನ್‌ಗೂನ್ಯ ಜ್ವರ ಹೆಚ್ಚಾಗುವ ಸಾಧ್ಯತೆ ಇದ್ದು, ಜನರು ಸೊಳ್ಳೆ ನಿಯಂತ್ರಣಕ್ಕೆ ಸ್ವಯಂಪ್ರೇರಿತ ಕ್ರಮಗಳನ್ನು ಕೈಗೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆ, ಹಗಲು ಹೊತ್ತಿನಲ್ಲಿ ಸೊಳ್ಳೆ ನಿರೋಧಕ ಮುಲಾಮುಗಳನ್ನು ಹಚ್ಚಿಕೊಳ್ಳಬೇಕು ಎಂದು ತಿಳಿಸಿದ್ದಾರೆ.